ಕಲಬುರಗಿ: ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಾಗಣಗೇರೆ ಗ್ರಾಮದಲ್ಲಿ ಅಣ್ಣ-ತಂಗಿ ವರಸೆಯ ಪ್ರೀತಿಗೆ ಪೋಷಕರು ನಿರಾಕರಿಸಿದ ಹಿನ್ನೆಲೆ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಶಶಿಕಲಾ(20) ಗೊಲ್ಲಾಳಪ್ಪ(24) ನೇಣಿಗೆ ಶರಣಾದ ಪ್ರೇಮಿಗಳಾಗಿದ್ದಾರೆ.
ಸಂಬಂಧದಲ್ಲಿ ಅಣ್ಣ ತಂಗಿ ಆಗಿದ್ದ ಶಶಿಕಲಾ ಮತ್ತು ಗೊಲ್ಲಾಳಪ್ಪ ಅವರ ಪ್ರೀತಿಗೆ, ಎರಡೂ ಮನೆಯವರು ನಿರಾಕರಣೆ ವ್ಯಕ್ತ ಪಡಿಸಿದ್ದಾರೆ. ಶಶಿಕಲಾಗೆ ಬೇರೆ ಮದುವೆ ಮಾಡಲು ಕುಟುಂಬಸ್ಥರು ಮುಂದಾಗಿದ್ದರು ಎನ್ನಲಾಗಿದೆ. ಅದರಂತೆ ವಿಜಯಪುರ ಜಿಲ್ಲೆಯ ಸಿಂಧಗಿ ಗ್ರಾಮದ ಯುವಕನ ಜೊತೆ ನಿಶ್ಚಿತಾರ್ಥ ಮಾಡಿಸಿದ್ದರು. ಮುಂದಿನ ತಿಂಗಳು ಮದುವೆ ಕೂಡ ನಿಶ್ಚಯವಾಗಿತ್ತು ಎನ್ನಲಾಗಿದೆ.
ಪ್ರಿಯತಮೆಗೆ ಮದುವೆ ನಿಶ್ಚಯ ಆಗಿರುವ ವಿಷಯ ತಿಳಿದ ಗೊಲ್ಲಾಳಪ್ಪ, ಶಶಿಕಲಾಳನ್ನು ಮನೆಯಿಂದ ಕರೆದುಕೊಂಡು ಹೋಗಿ, ಮಾಗಣಪುರ ಗ್ರಾಮದ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಬಳಿಕ ಅದೇ ಗ್ರಾಮದ ಹೊರವಲಯದ ತೋಟದ ಜಮೀನಿನಲ್ಲಿ ಜೋಡಿಗಳಿಬ್ಬರು ತಾವು ಮದುವೆ ಮಾಡಿಕೊಂಡಿರುವುದರ ಬಗ್ಗೆ ಸೆಲ್ಫಿ ಫೋಟೋ ತೆಗೆದು ಆತ್ಮಹತ್ಯೆಗೆ ಶರಣಾಗಿದ್ದಾರೆ.


