ಕೆ.ಆರ್.ಪೇಟೆ: ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಸ್ರೋ ಸಾಧನೆಗಳನ್ನು ಒಳಗೊಂಡ ಸಂಚಾರಿ ಪ್ರದರ್ಶನ ವಾಹನದಲ್ಲಿ ಇಸ್ರೋ ಸಾಧನೆಗಳ ಬಗ್ಗೆ ಸಾಕ್ಷ್ಯ ಚಿತ್ರಗಳ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು .
ಭಾರತೀಯರು 2040ರ ವೇಳೆಗೆ ಚಂದ್ರನ ಮೇಲೆ ಕಾಲಿಡಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಇಸ್ರೋ ಸಂಸ್ಥೆಯು ಬದ್ಧತೆಯಿಂದ ಕೆಲಸ ನಿರ್ವಹಿಸುತ್ತಿದೆ ಎಂದು ಇಸ್ರೋ ಬಾಹ್ಯಾಕಾಶ ಸಂಸ್ಥೆಯ ಸಂಚಾಲಕ ಶ್ರೀನಿವಾಸ್ ತಿಳಿಸಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಇಸ್ರೋ ಬಾಹ್ಯಾಕಾಶ ಸಂಸ್ಥೆಯ ಸಾಧನೆಗಳನ್ನು ಒಳಗೊಂಡ ಸಂಚಾರಿ ಪ್ರದರ್ಶನ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಸ್ರೋ ಬಾಹ್ಯಾಕಾಶ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಹ ಸಂಶೋಧನಾ ಕೆಲಸಗಳನ್ನು ಮಾಡಿದೆ. ಈ ಎಲ್ಲಾ ಯೋಜನೆಗಳನ್ನು ಪ್ರತಿಬಿಂಬಿಸುವ ಸಂಚಾರಿ ಪ್ರದರ್ಶನ ವಾಹನದಲ್ಲಿ ಆರ್ಯಭಟ, ಭಾಸ್ಕರ, ಕ್ರಯೋಜನಿಕ್ ಎಂಜಿನ್, ಉಪಗ್ರಹ ಉಡಾವಣೆ ಚಂದ್ರಯಾನ, ಮಂಗಳಯಾನ, ನೂತನ ಜಿಪಿಎಸ್ ತಂತ್ರಾಂಶ, ಬಾಹುಬಲಿ ರಾಕೆಟ್ ತಯಾರಿಕೆ, ಪಿಎಸ್ಎಲ್ ವಿ, ಜಿಎಸ್ಎಲ್ ವಿ ಸೇರಿದಂತೆ ಇಸ್ರೋ ಬಾಹ್ಯಾಕಾಶ ಸಂಸ್ಥೆಯು ಇಲ್ಲಿಯವರೆಗೆ ಕೈಗೊಂಡಿರುವ ಎಲ್ಲಾ ಯೋಜನೆಗಳ ಮಾದರಿಗಳನ್ನು ಒಳಗೊಂಡಿದ್ದು ಉಪಯೋಗವಾಗಲಿದೆ. ಒಂದೊಂದು ಮಾದರಿಯು ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದ್ದು ಅವುಗಳ ಬಗ್ಗೆ ವಿದ್ಯಾರ್ಥಿಗಳು ತಿಳಿಯುವುದು ಅಗತ್ಯವಾಗಿದೆ ಎಂದು ಶ್ರೀನಿವಾಸ್ ಹೇಳಿದರು.
ಇಸ್ರೋ ಬಾಹ್ಯಾಕಾಶ ಸಂಸ್ಥೆಯ ನಿರ್ದೇಶಕಿ ಮಾಲತಿ ಮಾತನಾಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಹ ಉತ್ತಮವಾಗಿ ವ್ಯಾಸಂಗ ಮಾಡಿದರೆ ಇಸ್ರೋದಲ್ಲಿ ಉದ್ಯೋಗವನ್ನು ಪಡೆಯಬಹುದಾಗಿದೆ, ಆದ್ದರಿಂದ ನೀವೆಲ್ಲರೂ ಉತ್ತಮವಾಗಿ ವ್ಯಾಸಂಗ ಮಾಡಿ ವಿವಿದಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಅವಕಾಶವನ್ನು ಗಿಟ್ಟಿಸಿಕೊಳ್ಳಬೇಕು. ಇಂಜಿನಿಯರಿಂಗ್ ತಂತ್ರಜ್ಞಾನದ ಎಲ್ಲಾ ವಿಭಾಗಗಳಿಗೂ ಉದ್ಯೋಗದಲ್ಲಿ ವಿಫಲವಾದ ಅವಕಾಶಗಳಿವೆ ಅವುಗಳನ್ನು ಸದುಪಯೋಗ ಪಡಿಸಿಕೊಂಡು ಸಾಧನೆ ಮಾಡಬೇಕು ಎಂದು ಮಾಲತಿ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮ್ ಮಾತನಾಡಿ ಇಂದಿನ ಮಕ್ಕಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಸಾಧನೆ ಮಾಡಲು ಅವಕಾಶವನ್ನು ಕಲ್ಪಿಸಿ ಕೊಡಲಾಗುತ್ತಿದೆ. ಹೊಸ ಹೊಳಲು ಗ್ರಾಮದ ಆಕಾಶ್ ಇದೇ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು ಪ್ರಸ್ತುತ ಇಸ್ರೋ ಸಂಸ್ಥೆಯಲ್ಲಿ ತಾಂತ್ರಿಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಆಕಾಶ್ ತನ್ನ ಹುಟ್ಟೂರಿನ ಈ ಮಹತ್ವದ ಪ್ರದರ್ಶನವನ್ನು ಮಾಡಿಸಬೇಕೆಂಬ ಆಸೆಯಿಂದ ಇಸ್ರೋ ಅಧಿಕಾರಿಗಳ ಗಮನಕ್ಕೆ ತಂದು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಂದು ಅಭಿಮಾನದಿಂದ ಹೇಳಿದರು.
ಇದೇ ಸಂದರ್ಭದಲ್ಲಿ ಕೆಆರ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಇಸ್ರೋ ತಾಂತ್ರಿಕ ವಿಭಾಗದ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಆಕಾಶ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಇಸ್ರೋ ಇಂಜಿನಿಯರ್ ಚಾರ್ಲ್ಸ್ ಬಾಸ್ಟಿನ್, ಉಪ ಪ್ರಾಂಶುಪಾಲ ರವಿಕುಮಾರ್, ಕೆ.ಆರ್.ಪೇಟೆ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್ ಕೆ ರಾಜೇಗೌಡ , ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ್, ಶಿಕ್ಷಣ ಸಂಯೋಜಕರಾದ ವೇಣುಗೋಪಾಲ್, ನೀಲಾ ಮಣಿ, ಮೋಹನ್, ವಜ್ರ ಪ್ರಸಾದ್ ಸೇರಿದಂತೆ ಕಾಲೇಜಿನ ಅಧ್ಯಾಪಕ ವರ್ಗದವರು ಸೇರಿದಂತೆ ನಾನಾ ಶಾಲಾ ಕಾಲೇಜುಗಳಿಂದ ಆಗಮಿಸಿದ್ದ ಸಾವಿರಾರು ಮಕ್ಕಳು ಪ್ರದರ್ಶನ ವಾಹನವನ್ನು ವೀಕ್ಷಿಸಿ ಬಾಹ್ಯಾಕಾಶದ ವಿಸ್ಮಯಗಳನ್ನು ಕಣ್ಣಾರೆ ಕಂಡು ಸಂಭ್ರಮಿಸಿದರು.