ತುಮಕೂರು: ತುಮಕೂರಿನ ಕಾಳಜಿ ಪೌಂಡೇಶನ್ ತಂಡದ ಸದಸ್ಯರು ಇಂದು ಸರ್ಕಾರಿ ಚಿತ್ರಕಲಾ ಪದವಿ ಕಾಲೇಜಿಗೆ ಭೇಟಿ ನೀಡಿ, ಇಲ್ಲಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಮಾತನಾಡಿಸಿ ಕಾಲೇಜಿನ ಕುಂದುಕೊರತೆಗಳ ಕುರಿತು ಮಾಹಿತಿ ಪಡೆದುಕೊಂಡರು.
ತುಮಕೂರು ಸರ್ಕಾರಿ ಚಿತ್ರಕಲಾ ಪದವಿ ಕಾಲೇಜು ಪ್ರಾರಂಭವಾಗಿ 30 ವರ್ಷಗಳು ಕಳೆದರೂ ಅಗತ್ಯ ಶೈಕ್ಷಣಿಕ ಸೌಕರ್ಯಗಳಿಂದ ವಂಚಿತವಾಗಿರುವುದು ತುಂಬ ನೋವಿನ ಸಂಗತಿಯಾಗಿದೆ.
ಈ ಕಾಲೇಜಿನಲ್ಲಿ ಕಲಿತ ಶೇ.90ರಷ್ಟು ವಿದ್ಯಾರ್ಥಿಗಳು ಸರ್ಕಾರಿ/ ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರಾಗಿ ಉದ್ಯೋಗ ಪಡೆದುಕೊಂಡಿದ್ದಾರೆ. ಇನ್ನುಳಿದ ವಿದ್ಯಾರ್ಥಿಗಳು ಈ ಕಾಲೇಜಿನಿಂದ ಪಡೆದ ಕಲಾ ಶಿಕ್ಷಣದ ಕೌಶಲ್ಯಗಳಿಂದ ಸ್ವತಂತ್ರ ಉದ್ಯೋಗ ಮಾಡುತ್ತಿದ್ದಾರೆ ಎಂಬುದು ಸಂತಸದ ಸಂಗತಿಯಾಗಿದೆ.
ಅಂದರೆ ಶೇ.100ರಷ್ಟು ವಿದ್ಯಾರ್ಥಿಗಳು ನಿರುದ್ಯೋಗ ಭೀತಿಯಿಂದ ಹೊರಗುಳಿದಿದ್ದಾರೆ. ಈ ಕಾಲೇಜಿನಲ್ಲಿ ಕಲಿಸಲಾಗುವ ಬಿ.ವಿ.ಎ ದೃಶ್ಯಕಲಾ ಪದವಿ ಪಡೆದ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿರುವ ಯಾವ ಉದಾಹರಣೆಗಳಿರುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
30 ವರ್ಷಗಳಿಂದ ಈ ಕಾಲೇಜಿಗೆ ಸ್ವಂತ ನಿವೇಶನ ಮಂಜೂರು ಮಾಡದೆ ಇರುವುದು ಮತ್ತು ಸ್ವತಂತ್ರ ಕಟ್ಟಡವನ್ನು ನಿರ್ಮಿಸಿಕೊಡದೇ ಇರುವುದು. ಸ್ಮಾರ್ಟ್ ಸಿಟಿ ತುಮಕೂರಿಗೆ ಅವಮಾನದ ಸಂಗತಿಯೇ ಸರಿ. ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಈ ಕಾಲೇಜಿನ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಕಂಡು ಬರುತ್ತಿದೆ.
ಚಿತ್ರಕಲಾ ಶಿಕ್ಷಣದ ಬಗ್ಗೆ ಅವರು ಕಾಳಜಿ ವಹಿಸದೆ ಇರುವುದು ಕಾಲೇಜಿನ ಸ್ಥಿತಿಗತಿಗಳನ್ನು ನೋಡಿದಾಗ ನಮಗೆ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಕಾಳಜಿ ಪೌಂಡೇಶನ್ ತಂಡದ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕಾಲೇಜಿನ ಸ್ಥಿತಿಗತಿಯನ್ನು ವೀಕ್ಷಿಸಿದ ನಂತರ ವಕೀಲರಾದ ಶಿವಕುಮಾರ್ ಮೇಸ್ಟ್ರುಮನೆ ಮಾತನಾಡಿ, ದಕ್ಷಿಣ ಕರ್ನಾಟಕದ ಭಾಗದಲ್ಲಿ ಇರುವ ಈ ಒಂದು ಕಾಲೇಜನ್ನು ಅಭಿವೃದ್ದಿ ಪಡಿಸಬೇಕಾದ ಅಗತ್ಯವಿದೆ. ಜೊತೆಗೆ ಇಂತಹ ಕಾಲೇಜೊಂದು 30 ವರ್ಷಗಳಿಂದ ಬೆಳೆದು ಬಂದಿರುವುದು ನಮ್ಮ ಜಿಲ್ಲೆಯ ಜನತೆ ಹೆಮ್ಮೆ ಪಡಬೇಕು. ಇಂತಹ ಕಲಾ ಶಿಕ್ಷಣ ನೀಡುವ ಕಾಲೇಜನ್ನು ಉಳಿಸಿ ಬೆಳೆಸಲು ನಾವುಗಳು ಯಾವುದೇ ಹೋರಾಟಕ್ಕೆ ಸಿದ್ದರಾಗಿದ್ದೇವೆ. ನಮ್ಮ ಹೋರಾಟಕ್ಕೆ ತುಮಕೂರು ಜಿಲ್ಲೆಯ ಪ್ರಜ್ಞಾವಂತ ನಾಗರೀಕರು, ಜನಪ್ರತಿನಿದಿಗಳು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ನಮ್ಮೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಚಿತ್ರಕಲಾ ಶಿಕ್ಷಣವು ಅಪರೂಪದ ಕೌಶಲ್ಯಗಳನ್ನು ಕಲಿಸುತ್ತಿರುವುದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ನಿರುದ್ಯೋಗದ ಬೀತಿ ಇಲ್ಲವೆಂಬ ಅಂಶ ಕಂಡುಬರುತ್ತದೆ. ಆದ್ದರಿಂದ ತುಮಕೂರು ಜಿಲ್ಲೆಯ ಬಡ ಮತ್ತು ಮಧ್ಯಮವರ್ಗದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಪದವಿ ಶಿಕ್ಷಣವು ಒಂದು ವರದಾನವಾಗಿದೆ ಎಂದರೆ ತಪ್ಪಾಗಲಾರದು. ಹೆಚ್ಚಿನ ವಿದ್ಯಾರ್ಥಿಗಳು ಈ ಪದವಿ ಶಿಕ್ಷಣದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳೋದು ಸೂಕ್ತವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಳಜಿ ಪೌಂಡೇಶನ್ ತಂಡದ ಸತೀಶ್ ಮಧುಗಿರಿ ರವರು ಮಾತನಾಡಿ, ಈ ಕಾಲೇಜಿನ ವಿದ್ಯಾರ್ಥಿಗಳಿಗೆ ದಿನನಿತ್ಯದ ಅಗತ್ಯಗಳಾದ ಶುದ್ಧ ಕುಡಿಯುವ ನೀರು, ಶೌಚಾಲಯ ಇಲ್ಲವೆಂಬ ಸಂಗತಿಯು ನೋವುಂಟು ತರುತ್ತದೆ. ಇಂತಹ ದುರಾವಸ್ಥೆಯಲ್ಲಿಯೂ ಸಹ ವಿದ್ಯಾರ್ಥಿಗಳು ಓದಲು ಮುಂದಾಗಿರುವುದು ಮೆಚ್ಚುವಂತಹದ್ದೆ, ಅವರಲ್ಲಿರುವ ಕಲಿಯುವ ಉತ್ಸಾಹ ಹಾಗೂ ಅವರ ಕಲಾಕೃತಿಗಳನ್ನು ನೋಡಿದರೆ ಎಂತಹವರೂ ಕೂಡ ಮೆಚ್ಚುವಂತೆ ಇವೆ. ಈ ಕಾರಣಗಳಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಈ ಕಾಲೇಜಿನ ಮಕ್ಕಳಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಅದರಲ್ಲೂ ಮಹಿಳಾ ವಿದ್ಯಾರ್ಥಿನಿಯರೇ ಹೆಚ್ಚಿರುವ ಈ ಕಾಲೇಜಿನಲ್ಲಿ ಅರೋಗ್ಯದ ಹಿತದೃಷ್ಟಿಯಿಂದ ಕುಡಿಯುವ ನೀರು, ಶೌಚಾಲಯವನ್ನು ತುರ್ತಾಗಿ ಒದಗಿಸಲು ಒತ್ತಾಯಿಸಿದರು. ಜೊತೆಗೆ ಈ ಕಾಲೇಜಿಗೆ ಸ್ವಂತ ಕಟ್ಟಡ ಇರುವುದಿಲ್ಲ. ಸರ್ಕಾರಿ ಪದವಿಪೂರ್ವ ಕಾಲೇಜಿನ ಅಂಗಳದ ಸೈಕಲ್ ಸ್ಟ್ಯಾಂಡ್ ಜಾಗದಲ್ಲಿ ಸಿಮೆಂಟ್ ಸೀಟ್ ನಿಂದ ಕೂಡಿದ ಕಟ್ಟಡವು ಬಿದ್ದುಹೋಗುವ ಹಂತ ತಲುಪಿದೆ. ಇದು ಸರ್ಕಾರಿ ಕಟ್ಟಡವು ಆಗಿರುವುದರಿಂದ ಲೋಕೋಪಯೋಗಿ ಇಲಾಖೆಯವರು ಹಾಗೂ ಜಿಲ್ಲಾಡಳಿತದಿಂದ ಕಾಲೇಜಿನ ಕಟ್ಟಡದ ದುರಸ್ಥೆಯನ್ನೂ ಸಹ ಮಾಡಿಕೊಡದಿರುವುದು ತುಂಬ ಬೇಸರವೆನಿಸುತ್ತದೆ. ಸಂಬಂಧಪಟ್ಟ ಇಲಾಖೆಯು ಕೂಡಲೇ ಎಚ್ಚೆತ್ತುಕೊಂಡು ಸರ್ಕಾರಿ ಚಿತ್ರಕಲಾ ಪದವಿ ಕಾಲೇಜಿನ ಕಟ್ಟಡವನ್ನು ತುರ್ತಾಗಿ ದುರಸ್ಥಿ ಮಾಡಿಕೊಡಲು ಒತ್ತಾಯಿಸುತ್ತೇನೆ ಹಾಗೂ ಸ್ವಂತ ಕಟ್ಟಡ ನಿರ್ಮಿಸಿಕೊಡಲು ಮುಂದಾಗಬೇಕು. ಇಲ್ಲದೆ ಹೋದರೆ ತುಮಕೂರಿನ ಕಾಳಜಿ ಪೌಂಡೇಶನ್ ತಂಡವು ಹೋರಾಟ ಮಾಡಲು ಮುಂದಾಗುತ್ತದೆ ಎಂದು ಎಚ್ಚರಿಸಿದರು.
ಸರ್ಕಾರಿ ಚಿತ್ರಕಲಾ ಪದವಿ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಜಿ.ಎಲ್.ನಟರಾಜ್ ಮಾತನಾಡಿ, ನಾನು ಇದೇ ಕಾಲೇಜಿನಲ್ಲಿ ವಿದ್ಯಾಬ್ಯಾಸ ಮಾಡಿದ್ದೇನೆ. ಇಲ್ಲಿನ ಸಮಸ್ಯೆಗಳನ್ನು ಈ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ನೆರವು ಪಡೆದು ಅಗತ್ಯ ಅನುಕೂಲತೆಗಳನ್ನು ಪ್ರಾಂಶುಪಾಲರ ಕೋರಿಕೆಯಂತೆ ಶಕ್ತಿಮೀರಿ ಪ್ರಯತ್ನಿಸಿದ್ದೇವೆ. ನಮ್ಮ ಸಂಘದ ವತಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಜನಪ್ರತಿನಿದಿಗಳಿಗೆ ಅನೇಕ ಬಾರಿ ಮನವಿ ಪತ್ರಗಳನ್ನು ಸಲ್ಲಿಸಿದ್ದೇವೆ. ಇಲ್ಲಿವರೆಗೂ ಯಾವುದೇ ಪ್ರಯೋಜನ ದೊರೆಯದಿರುವುದು ನಮ್ಮ ಸಂಘದ ಸದಸ್ಯರಿಗೆ ನೊವುಂಟು ಮಾಡಿದೆ. ಸರ್ಕಾರವೂ ಕೂಡ ಈ ಕಾಲೇಜಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುಂದಾಗದೆ ಇರುವುದು ಅತ್ಯಂತ ದುಃಖದ ಸಂಗತಿಯಾಗಿದೆ. ಈಗಲಾದರೂ ಸಂಬಂಧಪಟ್ಟವರು ಈ ಕಾಲೇಜಿನ ಅಭಿವೃದ್ಧಿಗೆ ಮುಂದಾಗಬೇಕಾಗಿದೆ ಎಂದರು.
ಕಾಳಜಿ ಪೌಂಡೇಶನ್ ತಂಡದ ಸದಸ್ಯರು ಈ ಕಾಲೇಜ್ ಪ್ರಾಂಶುಪಾಲರಾದ ಸಿ.ಸಿ.ಬಾರಕೇರ ಅವರನ್ನು ಮಾತನಾಡಿಸಿದಾಗ ತುಮಕೂರು ಜಿಲ್ಲೆಯ ಅಧಿಕಾರಿಗಳು, ಜನನಾಯಕರು, ಸಾರ್ವಜನಿಕರಲ್ಲಿ ಈ ಕಾಲೇಜನ್ನು ಉಳಿಸಿಕೊಳ್ಳಲು ಶ್ರಮಿಸಬೇಕೇಂದು ಮನವಿ ಮಾಡಿದರು. ದಕ್ಷಿಣ ಕರ್ನಾಟಕದ 10-12 ಜಿಲ್ಲೆಗಳು ಹಾಗೂ ಹೊರರಾಜ್ಯಗಳ ಬಡ ವಿದ್ಯಾರ್ಥಿಗಳು ಕಡಿಮೆ ಫೀ ಹಣವಿರುವ ಗುಣಮಟ್ಟದ ಶಿಕ್ಷಣವಿರುವ ಈ ಸರ್ಕಾರಿ ಕಾಲೇಜನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಅವರಲ್ಲಿ ಹಲವಾರು ವಿದ್ಯಾರ್ಥಿಗಳು ದುರಸ್ಥಿ ಕಾಣದೆ ಶಿಥಿಲಾವಸ್ಥೆಯಲ್ಲಿರುವ ಈ ಕಟ್ಟಡ ಮತ್ತು ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಗ್ರಂಥಾಲಯ, ಕಂಪ್ಯೂಟರ್ ಕೊಠಡಿ, ಸ್ಮಾರ್ಟ್ ಕ್ಲಾಸ್ ರೂಂಗಳು, ಅಂತರ್ಜಾಲ ಸೌಲಭ್ಯಗಳು ಇಲ್ಲದಿರುವುದನ್ನು ಕಂಡು ಈ ಕಾಲೇಜಿಗೆ ಪ್ರವೇಶ ಪಡೆಯದೆ ಮರಳಿಹೋಗುತ್ತಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ. ಜೊತೆಗೆ ಚಿತ್ರಕಲಾ ಶಿಕ್ಷಣಕ್ಕೆ ಅಗತ್ಯವಾದ ಪೀಠೋಪಕರಣಗಳು, ಕಲಿಕೋಪಕರಣಗಳು ಇಲ್ಲದಿರುವುದು ಮತ್ತೊಂದು ಕಾರಣವಾಗಿದೆ. ಕಳೆದ 5 ವರ್ಷಗಳಿಂದ ನಮ್ಮ ಕಾಲೇಜು ‘ಕಾಲೇಜು ಶಿಕ್ಷಣ ಇಲಾಖೆ’ಗೆ ಹಸ್ತಾಂತರಗೊಂಡಿದ್ದು ಈ ಇಲಾಖೆಯ ಅಧಿಕಾರಿಗಳು ಗಮನಹರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಅನೇಕ ಗ್ರಂಥಗಳನ್ನು ಹಾಗೂ ಕಂಪ್ಯೂಟರ್ ಗಳನ್ನು ನೀಡಿರುತ್ತಾರೆ. ಗ್ರಂಥಗಳನ್ನು ಸುರಕ್ಷಿತವಾಗಿಡಲು ಟ್ರಜುರಿಗಳು ಇರಲಿಲ್ಲ . ದಾನಿಗಳು ಹಾಗೂ ಸಿಬ್ಬಂದಿಗಳಿಂದ ಹಣಕಾಸಿನ ನೆರವು ಪಡೆದುಕೊಂಡು ಎರಡು ಟ್ರಜುರಿಗಳನ್ನು ಖರೀದಿಸಿ ಪುಸ್ತಕಗಳನ್ನು ಸುರಕ್ಷಿತವಾಗಿಡಲಾಗಿದೆ. ಆದರೆ ಇಲಾಖೆಯಿಂದ ನೀಡಿದ ಐದು ಕಂಪ್ಯೂಟರ್ ಗಳನ್ನು ತರಗತಿಗಳಲ್ಲಿಟ್ಟು ಪಾಠ ಬೋಧನೆ ಮಾಡಲು ಹಾಗೂ ಕಂಪ್ಯೂಟರ್ ಗಳನ್ನು ಇಡಲು ಕೊಠಡಿಗಳು ಸುರಕ್ಷಿತವಾಗಿಲ್ಲ. ಸುರಕ್ಷಿತ ಕಟ್ಟಡಗಳ ಅಗತ್ಯವಿದೆ.ಇಲಾಖೆ ಅಧಿಕಾರಿಗಳ ಸಹಕಾರದಿಂದ ಇತರೆ ಪದವಿ ಕಾಲೇಜುಗಳಂತೆ ಈ ಕಾಲೇಜಿಗೂ ಸಹ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲಾಗುತ್ತಿದೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ ಬೋಧಕರ ಕೊರತೆಯನ್ನು ಮಾತ್ರ ನೀಗಿಸಿದಂತಾಗಿದೆ. ಇದರಿಂದ ಪ್ರವೇಶಾತಿ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂಬುದು ಸಂತಸದ ಸಂಗತಿ ಎಂದರು. ಇದೇರೀತಿ ಈ ಕಾಲೇಜಿನ ಅಭಿವೃದ್ಧಿಗೆ ನಮ್ಮ ಮೇಲಾಧಿಕಾರಿಗಳು ಈ ಕಾಲೇಜಿನ ಬೆಳವಣಿಗೆಗೆ ಸಹಕರಿಸುತ್ತಾರೆ ಎಂಬ ಭರವಸೆ ಇದೆ ಎಂದು ಅಧಿಕಾರ ಸಹಾಯವನ್ನು ಸ್ಮರಿಸಿಕೊಂಡರು,
ಆಂಧ್ರದ ವಿದ್ಯಾರ್ಥಿನಿ ಕು.ಲಕ್ಷ್ಮೀ ಮಾತನಾಡಿ, ನಾನು ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಇದ್ದುಕೊಂಡು ದಿನವೂ ತುಮಕೂರು ಕಾಲೇಜಿಗೆ ಚಿತ್ರಕಲಾ ಶಿಕ್ಷಣ ಪಡೆಯಲು ಬರುತ್ತಿದ್ದೇನೆ. ಕಾರಣ ಇಲ್ಲಿನ ಗುರುಗಳು ನೀಡುವ ಉತ್ತಮ ಶಿಕ್ಷಣ ನನಗೆ ಇಷ್ಟವಾಗುತ್ತದೆ. ಆದರೆ ನನ್ನಂತ ವಿದ್ಯಾರ್ಥಿನಿಯರಿಗೆ ಹಾಗೂ ಶಿಕ್ಷಕಿಯರಿಗೆ ಶೌಚಾಲಯ ವ್ಯವಸ್ಥೆ, ಇಲ್ಲದಿರುವುದು ತುಂಬ ಬೇಸರ ತರುತ್ತಿದೆ. ಮತ್ತು ನಮಗೆ ಬೇಕಾದ ಕಲಾ ಪರಿಕರಗಳಾದ ಈಜಲ್ಸ್, ಡಾಂಕಿಸೀಟ್, ಸ್ಟಿಲ್ ಲೈಫ್ ಸ್ಟ್ಯಾಂಡ್ ಹಾಗೂ ಇನ್ನಿತರೆ ಸೌಕರ್ಯಗಳು ನಮಗೆ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದಳು.
ಈ ಸಂದರ್ಭದಲ್ಲಿ ವಕೀಲರಾದ ಮಾರನಹಳ್ಳಿ ಗಣೇಶ್, ಪದ್ಮನಾಭ , ಮೋಹನ್ , ಕಾಳಜಿ ಪೌಂಡೇಶನ್ ತಂಡದ ಸದಸ್ಯರಾದ ಮಧುಗಿರಿ ಮಹೇಶ್, ಮಾಚನಹಳ್ಳಿ ಮುನಿರಾಜು, ರಫೀಕ್ ಬೆಳೆದರ ಹಾಗೂ ಕುಣಿಗಲ್ ನರಸಿಂಹಮೂರ್ತಿ ಮುಂತಾದವರು ಉಪಸ್ಥಿತರಿದ್ದರು.