ಬೆಂಗಳೂರು: ಅರಣ್ಯದಲ್ಲಿ ಸಸ್ಯಹಾರಿ ಪ್ರಾಣಿಗಳಿಗೆ ಮಾರಕವಾಗಿರುವ ಲಾಂಟನಾ ಕಳೆಯಿಂದ ಆನೆ, ಕಾಡೆಮ್ಮೆ, ಪೀಠೋಪಕರಣ ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಆದಿವಾಸಿ ಸಮುದಾಯದವರಿಗೆ ತರಬೇತಿ ಮತ್ತು ಪೋತ್ಸಾಹ ನೀಡಲು 1 ಕೋಟಿ ರೂ. ನೆರವು ನೀಡುವ ಬಗ್ಗೆ ಪರಿಶೀಲಿಸುವುದಾಗಿ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರಿನ ಲಾಲ್ ಬಾಗ್ ನಲ್ಲಿಂದು ಲಾಂಟನಾ ಕಡ್ಡಿಗಳಿಂದ ತಯಾರಿಸಿದ ಕಾಡೆಮ್ಮೆ ಮತ್ತು ಆನೆಯ ಆಕೃತಿಗಳನ್ನು ಅನಾವರಣ ಮಾಡಿ ಅವರು ಮಾತನಾಡುತ್ತಿದ್ದರು.
ಮುಳ್ಳಿನಿಂದ ಕೂಡಿದ ಲಾಂಟನಾ ರಾಜ್ಯದ ಬಂಡೀಪುರ, ನಾಗರಹೊಳೆ, ಬಿಳಿಗಿರಿ ರಂಗನ ಬೆಟ್ಟ ಮೊದಲಾದ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕವಾಗಿ ವ್ಯಾಪಿಸಿದ್ದು, ಇದರಿಂದ ಆನೆ, ಜಿಂಕೆ ಇತ್ಯಾದಿ ಸಸ್ಯಹಾರಿ ಪ್ರಾಣಿಗಳಿಗೆ ಹುಲ್ಲೂ ಸಿಗದಂತಾಗಿದೆ. ಹೀಗಾಗಿ ಈ ಕಳೆಯನ್ನು ತೆಗೆಯುವುದು ಅನಿವಾರ್ಯವಾಗಿದೆ ಎಂದರು.
ಆದಿವಾಸಿಗಳ ನೆರವಿನಿಂದ ಈ ಕಳೆ ತೆಗೆಸಿ, ಅಲಂಕಾರಿಕ ವಸ್ತು ತಯಾರಿಸಿದರೆ ಅದರಿಂದ ಜೀವನೋಪಾಯವೂ ಆಗುತ್ತದೆ, ಕಾಡಿನ ಕಳೆಯ ಸಮಸ್ಯೆಗೂ ಪರಿಹಾರ ಲಭಿಸುತ್ತದೆ ಎಂದು ಅಭಿಪ್ರಾಯಪಟ್ಟರು.


