ಬೆಂಗಳೂರು : ರಾತ್ರಿ ವೇಳೆ ಕಸ ಎಸೆಯುವುದಕ್ಕೆ ಹೋಗಿದ್ದ ಯುವತಿಗೆ ಕಿಡಿಗೇಡಿಗಳು ಖಾಸಗಿ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರಿನ ಕೋರಮಂಗದಲ್ಲಿ ನಡೆದಿದೆ.
ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೋರಮಂಗಲ ಆಟೋ ಸ್ಟಾಂಡ್ ಬಳಿಯಲ್ಲಿ ಕಸ ಎಸೆಯಲು ಹೋಗಿದ್ದ ಯುವತಿಯನ್ನು ಹಿಡಿದುಕೊಂಡು ಯುವಕನೋರ್ವ ಲೈಂಗಿಕ ಕಿರುಕುಳ ನೀಡಿದ್ದು, ಜ.28ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೋರಮಂಗಲದ ಆಟೋ ನಿಲ್ದಾಣದ ಬಳಿ ಇರುವ ಜಾಗದಲ್ಲಿ ಕಸವನ್ನು ಎಸೆಯಲು ಹೋಗಿದ್ದ ಯುವತಿ, ತಾನು ಲೈಂಗಿಕ ಕಿರುಕುಳ ಅನುಭವಿಸಿದ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಅಂದು ರಾತ್ರಿ ಯುವತಿಯೊಬ್ಬಳು ತನ್ನ ಸ್ನೇಹಿತನೊಂದಿಗೆ ಮಧ್ಯರಾತ್ರಿ ವೇಳೆ ಕಸ ಎಸೆಯಲು ಹೋಗಿದ್ದಳು. ಈ ವೇಳೆ ಕೋರಮಂಗಲ ಆಟೋ ಸ್ಟಾಂಡ್ ಬಳಿ ಕುಳಿತಿದ್ದ ಪುಂಡರ ಗುಂಪು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕ–ಯುವತಿಯನ್ನು ಹಿಂಬಾಲಿಸಿಕೊಂಡು ಹೋಗಿದೆ.
ನಂತರ, ನಿರ್ಜನ ಪ್ರದೇಶದಲ್ಲಿ ಕಸ ಎಸೆದು ವಾಪಸ್ ಬರುವಾಗ ಅವರನ್ನು ಹಿಂಬಾಲಿಸಿದ ಪುಂಡರ ಗುಂಪಿನಲ್ಲಿದ್ದ ನಾಲ್ವರು, ಯುವತಿಯನ್ನು ಅಡ್ಡಗಟ್ಟಿ ಹಿಡಿದುಕೊಂಡಿದ್ದಾರೆ. ಈ ವೇಳೆ ತಡೆಯಲು ಮುಂದಾದ ಯುವತಿಯ ಸ್ನೇಹಿತನಿಗೂ ಥಳಿಸಿದ್ದಾರೆ. ನಂತರ, ಯುವತಿಯ ಬಾಯಿ ಮುಚ್ಚಿ ಹಿಡಿದುಕೊಂಡು ಆಕೆಯ ಖಾಸಗಿ ಅಂಗಗಳನ್ನು ಸ್ಪರ್ಶಿಸಿ ಕಿರುಕುಳ ನೀಡಿದ್ದಾರೆ.
ಇದಕ್ಕೆ ಯುವತಿ ತೀವ್ರ ಪ್ರತಿರೋಧ ತೋರಿದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಯುವತಿ ಗಾಯಗೊಂಡಿದ್ದಾಳೆ. ನಂತರ, ಯುವಕ ರಕ್ಷಣೆಗಾಗಿ ಕೂಗಿಕೊಂಡಾಗ ಆತನಿಗೆ ಮತ್ತೆ ಥಳಿಸಿ ಅಲ್ಲಿಂದ ಇಬ್ಬರನ್ನೂ ಬಿಟ್ಟು ಪರಾರಿ ಆಗಿದ್ದಾರೆ ಎಂದು ವರದಿಯಾಗಿದೆ.
ಇನ್ನು ಗಾಯಗೊಂಡ ಯುವತಿ ಆಸ್ಪತ್ರೆಗೆ ತೆರಳಿ ಪ್ರಾಥಮಿಕ ಚಿಕಿತ್ಸೆ ಪಡೆದು ನಂತರ, ಆಡುಗೋಡಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ.
ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ನಾಲ್ವರು ಕೂಡ ಅಪ್ರಾಪ್ತ ಬಾಲಕರು ಎಂದು ತನಿಖೆಯಲ್ಲಿ ಬಯಲಾಗಿದೆ.


