ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಕೂನಬೇವು ಗ್ರಾಮದಲ್ಲಿ ಪತಿಯೊಬ್ಬ ನಂಬಿ ಬಂದವಳನ್ನು ಬಿಟ್ಟು ಮತ್ತೊಬ್ಬ ಮಹಿಳೆಯನ್ನ ವಿವಾಹವಾದ ವಿಚಾರ ತಿಳಿದ ಮಹಿಳೆ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ನೇಣಿಗೆ ಶರಣಾದ ಮಹಿಳೆಯನ್ನು ವಿಶಾಲಾಕ್ಷಿ(21) ಎಂದು ಗುರುತಿಸಲಾಗಿದೆ.
ಈಕೆಯ ಮನೆಯ ಹತ್ತಿರವೇ ವಾಸವಿದ್ದ ತಿಪ್ಪೇಸ್ವಾಮಿ, ಜಿಟಿಟಿಸಿಯಲ್ಲಿ ತರಬೇತಿ ಪಡೆಯುತ್ತಿದ್ದ ವಿಶಾಲಾಕ್ಷಿಯನ್ನು ಪ್ರೀತಿಸಿ ಕಳೆದ ವರ್ಷವಷ್ಟೇ ವಿವಾಹವಾಗಿದ್ದ.
ತಿಪ್ಪೇಸ್ವಾಮಿ ಎಸ್ಟಿ (ನಾಯಕ) ಸಮುದಾಯಕ್ಕೆ ಸೇರಿದ್ದರೆ, ವಿಶಾಲಾಕ್ಷಿ ಎಸ್ಸಿ (ಮಾದಿಗ) ಸಮುದಾಯಕ್ಕೆ ಸೇರಿದ್ದಳು. ಹೀಗಾಗಿ, ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧವಿತ್ತು. ಆದರೂ ವಿರೋಧದ ನಡುವೆ ಇಬ್ಬರೂ ಊರು ತೊರೆದು ನಾಯಕನಹಟ್ಟಿ ಬಳಿಯ ಚೌಡಮ್ಮ ದೇಗುಲದಲ್ಲಿ ಮದುವೆ ಆಗಿದ್ದರು. ಇದನ್ನು ತಿಪ್ಪೇಸ್ವಾಮಿ ಕುಟುಂಬಸ್ಥರು ವಿರೋಧಿಸಿದ್ದರಿಂದ ಆಸಾಮಿ ಪತ್ನಿಯಿಂದ ದೂರವಾಗಿದ್ದ. ದಾರಿಕಾಣದ ವಿಶಾಲಾಕ್ಷಿ ಕೂನಬೇವು ಗ್ರಾಮದಲ್ಲಿದ್ದ ತನ್ನ ತವರು ಮನೆಯಲ್ಲಿದ್ದುಕೊಂಡೇ ಮತ್ತೆ ಜಿಟಿಟಿಸಿ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದರು.
ಈ ನಡುವೆ ತಿಪ್ಪೇಸ್ವಾಮಿ ಬೇರೊಬ್ಬ ಮಹಿಳೆಯೊಂದಿಗೆ ವಿವಾಹವಾದ ವಿಚಾರ ತಿಳಿದು ವಿಶಾಲಾಕ್ಷಿ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶಾಲಾಕ್ಷಿ ಆತ್ಮಹತ್ಯೆಯಿಂದ ಆಕ್ರೋಶಗೊಂಡ ವಿಶಾಲಾಕ್ಷಿಯ ಕುಟುಂಬಸ್ಥರು ಹಾಗೂ ಸಂಬಂಧಿಕರು ಮೃತದೇಹದ ಅಂತ್ಯ ಸಂಸ್ಕಾರ ನಡೆಸದೇ ಚಿತ್ರದುರ್ಗ ಎಸ್ಪಿ ಕಚೇರಿ ಬಳಿ, ಧರಣಿ ನಡೆಸುತಿದ್ದಾರೆ. ವಿಶಾಲಾಕ್ಷಿ ಸಾವಿಗೆ ಕಾರಣವಾದ ತಿಪ್ಪೇಸ್ವಾಮಿಯನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟಿಸುತಿದ್ದಾರೆ. ಇದರಿಂದ ಪೊಲೀಸರು ಮೊದಲು ಮೃತ ಮಹಿಳೆಯ ಅಂತ್ಯಸಂಸ್ಕಾರ ನಡೆಸುವಂತೆ ಕುಟುಂಬಸ್ಥರ ಮನವೊಲಿಸಿದ್ದಾರೆ.
ತಿಪ್ಪೇಸ್ವಾಮಿ ಮತ್ತು ಕುಟುಂಬದವರ ದರ್ಪ, ವಂಚನೆಯಿಂದ ಬೇಸತ್ತು ಸಾವಿಗೆ ಶರಣಾಗಿದ್ದಾಳೆ. ಹೀಗಾಗಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂಬುದು ಯುವತಿ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


