ತುಮಕೂರು: ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ನಿಂದ ಕುಣಿಗಲ್ ಮುಖಾಂತರ ಮಾಗಡಿಗೆ ನೀರು ಹರಿಸುವ ಯೋಜನೆಗೆ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ವಿರೋಧಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಎಕ್ಸ್ ಪ್ರೆಸ್ ಕೆನಾಲ್ನಿಂದ ಮಾಗಡಿಗೆ ನೀರು ತೆಗೆದು ಕೊಂಡು ಹೋಗಲು ಯೋಜಿಸುತ್ತಿರುವುದು ತುಮಕೂರು ಜಿಲ್ಲೆಗೆ ಮಾಡಿದ ಅನ್ಯಾಯ. ಈಗಾಗಲೇ ಕುಣಿಗಲ್ ಗೆ 2 ಟಿಎಂಸಿ ನೀರು ಹರಿಯುತ್ತಿದೆ. ಡಿ.ಕೆ.ಶಿವಕುಮಾರ್ ಎಕ್ಸ್ ಪ್ರೆಸ್ ಕೆನಾಲ್ ನೆಪದಲ್ಲಿ ಮಾಗಡಿಗೆ ನೀರು ತೆಗೆದುಕೊಂಡು ಹೋಗಲು ಪ್ಲಾನ್ ಮಾಡಿದ್ದಾರೆ. ಅವರು ಬೆಂಗಳೂರು ಗ್ರಾಮಾಂತರ ಗೆಲ್ಲಲು ತುಮಕೂರು ಜಿಲ್ಲೆಗೆ ಅನ್ಯಾಯ ಮಾಡುತ್ತಿದ್ದಾರೆಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಗೆ ಯಾಕೋ ಶಕ್ತಿ ಕಡಿಮೆಯಾಗಿದೆ. ಕಳೆದ ಬಾರಿ ಅವರೇ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಕೂಡ ವಿರೋಧಿಸಿದ್ದರು. ಈಗ ಯಾವುದೋ ಒತ್ತಡದಿಂದ ಅವರಿಬ್ಬರೂ ಸುಮ್ಮನಿದ್ದಾರೆಂದು ಹರಿಹಾಯ್ದರು. ಡಿ.ಕೆ. ಶಿವಕುಮಾರ್ ರಾಜ್ಯದ ಜನತೆ ತಮ್ಮ ಮಾತು ಕೇಳಬೇಕೆಂಬ ಸ್ವಭಾವ ಬಿಡಬೇಕು. ಲಿಂಕಿಂಗ್ ಕೆನಾಲ್ ನಿಂದ ತುಮಕೂರು ಜಿಲ್ಲೆಗೆ ಅನ್ಯಾಯವಾಗಲಿದೆ ಎಂದರು. ನಾವು ಈ ಕುರಿತು ಹೋರಾಟ ರೂಪಿಸುತ್ತೇವೆ. ಅನಿವಾರ್ಯವಿದ್ದರೆ ಕೋರ್ಟ್ ಗೂ ಹೋಗುತ್ತೇವೆಂದು ಎಚ್ಚರಿಸಿದರು.
ಕೆಡಿಪಿ ಸಭೆಯಲ್ಲಿ ಬಿಜೆಪಿ, ಜೆಡಿಎಸ್ ಶಾಸಕರು ಎಕ್ಸ್ ಪ್ರೆಸ್ ಕೆನಾಲ್ ಗೆ ವಿರೋಧ ವ್ಯಕ್ತಪಡಿಸಿದ್ದು, ಅದಕ್ಕೆ ಡಾ.ಜಿ.ಪರಮೇಶ್ವರ್ ಕೂಡಾ ಜಿಲ್ಲೆಯ ಮಣಿಯಲೇಬೇಕಿರುವ ಅನಿವಾರ್ಯ ಹಾಗೂ ಮಾಜಿ ಸಚಿವ ಜೆ.ಸಿ.ಮಾಧು ಸ್ವಾಮಿ ಸುದ್ದಿಗೋಷ್ಟಿಮೂಲಕ ವಿರೋಧ ವ್ಯಕ್ತಪ ಡಿಸಿದ ಬೆಳವಣಿಗೆ ಎರಡೂ ಏಕಕಾಲದಲ್ಲಿ ನಡೆದಿದೆ. ಹಾಲಿ–ಮಾಜಿಗಳು ಸೇರಿದಂತೆ ಜಿಲ್ಲೆಯ ಜನಪ್ರನಿಧಿಗಳ ನಿಲುವು ಎಕ್ಸ್ ಪ್ರೆಸ್ ಕೆನಾಲ್ ವಿಚಾರದಲ್ಲಿ ಪ್ರತ್ಯಕ್ಷ– ಪರೋಕ್ಷ ಒಮ್ಮತ ಇರುವುದು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಪ್ಲಾನ್ ಗೆ ಟಕ್ಕರ್ ನೀಡಿದಂತೆ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


