ಲೋಕಸಭಾ ಚುನಾವಣೆಗೆ ಕೆಲವು ವಾರಗಳು ಮಾತ್ರ ಬಾಕಿಯಿದ್ದು, ಪಕ್ಷಗಳು ಚುನಾವಣೆಗೆ ಭರ್ಜರಿ ತಯಾರಿ ಆರಂಭಿಸಿವೆ. ಮೊನ್ನೆ ತಾನೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು 195 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ರಾಜ್ಯ ಬಿಜೆಪಿ ಕೋರ್ ಕಮಿಟಿ ಸದಸ್ಯರು ಕೂಡ ಸಭೆ ನಡೆಸಿ ಸಂಭಾವ್ಯ ಸಮರ್ಥ ಅಭ್ಯರ್ಥಿಗಳ ಹೆಸರನ್ನು ವರಿಷ್ಠರಿಗೆ ಸಲ್ಲಿಸಲು ನಿರ್ಧರಿಸಿದ್ದಾರೆ. ಈ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ 15 ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿದೆ ಎನ್ನಲಾಗಿದೆ.
ಹೌದು, ಕಾಂಗ್ರೆಸ್ ನ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಭವನೀಯರ ಪಟ್ಟಿಯನ್ನು ರೆಡಿ ಮಾಡಿ ದೆಹಲಿಗೆ ಕಳುಹಿಸಲು ಸೋಮವಾರ ಚರ್ಚೆ ನಡೆಸಿದ್ದು, ಈ ಸಭೆಯಲ್ಲಿ ಸುಮಾರು 15 ಕ್ಷೇತ್ರಗಳ ಹೆಸರನ್ನು ಫೈನಲ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚರ್ಚೆಯಾಗಿರುವ ಮೊದಲ 15 ಮಂದಿಯ ಪಟ್ಟಿಯಲ್ಲಿ ಹಾಲಿ ಸಚಿವರ ಪೈಕಿ ಕೋಲಾರ ಕ್ಷೇತ್ರಕ್ಕೆ ಕೆ.ಎಚ್. ಮುನಿಯಪ್ಪ ಅವರ ಹೆಸರು ಮಾತ್ರ ಇದೆ. ಹಾಲಿ ಶಾಸಕರ ಪೈಕಿ ಬೆಂಗಳೂರು ಕೇಂದ್ರಕ್ಕೆ ಎನ್.ಎ. ಹ್ಯಾರೀಸ್ ಅವರ ಹೆಸರು ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ಅವರನ್ನು ಕಲಬುರಗಿ ಕ್ಷೇತ್ರದಿಂದ ಕಣಕ್ಕಿಸಲು ನಿರ್ಧರಿಸಲಾಗಿದೆ.
- ಶಿವಮೊಗ್ಗ ಕ್ಷೇತ್ರಕ್ಕೆ ನಟ ಶಿವರಾಜಕುಮಾರ್ ಅವರ ಪತ್ನಿ ಗೀತಾ ಶಿವರಾಜಕುಮಾರ್
- ಬೆಂಗಳೂರು ಗ್ರಾಮಾಂತರಕ್ಕೆ ಡಿ.ಕೆ. ಸುರೇಶ್
- ಮಂಡ್ಯ ಕ್ಷೇತ್ರಕ್ಕೆ ಸ್ಟಾರ್ ಚಂದ್ರು (ವೆಂಕಟೇರಮಣಗೌಡ),
- ಮೈಸೂರಿಗೆ ಲಕ್ಷ್ಮಣ್
- ಹಾಸನಕ್ಕೆ ಶ್ರೇಯಸ್ ಪಟೇಲ್
- ತುಮಕೂರಿಗೆ ಈಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮುದ್ದಹನುಮೇಗೌಡ
- ಚಿಕ್ಕಬಳ್ಳಾಪುರಕ್ಕೆ ರಕ್ಷಾ ರಾಮಯ್ಯ
ಇವುಗಳನ್ನು ಸೇರಿ 15 ಕ್ಷೇತ್ರಗಳಿಗೆ ಹೆಸರು ನಿರ್ಧರಿಸಿ ಅಂತಿಮ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಡಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


