ಬೆಂಗಳೂರಿನ ವಿಶೇಷ ನ್ಯಾಯಾಲಯದ ಸುಪರ್ದಿಯಲ್ಲಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅಕ್ರಮವಾಗಿ ಗಳಿಸಿದ್ದ ಜಿನ್ನಾಭರಣಗಳನ್ನು ತಮಿಳುನಾಡು ಸರಕಾರಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆಗೆ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆ ನೀಡಿದೆ.
ಜಯಲಲಿತಾ ಪುತ್ರಿ ಜೆ.ದೀಪಾ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಂ. ನವಾಜ್ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ. ಅಲ್ಲದೆ, ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಸೂಚನೆ ಅರ್ಜಿದಾರರ ಪರ ವಕೀಲರು, ”ಜಯಲಲಿತಾ ವಿರುದ್ಧದ ಭ್ರಷ್ಟಾಚಾರ ಆರೋಪ ಸಂಬಂಧ ಸುಪ್ರೀಂಕೋರ್ಟ್‌ನಿಂದ ತೀರ್ಪು ಬರುವ ಮುನ್ನವೇ ಅವರು ಮೃತರಾಗಿದ್ದರು. ಆದ ಕಾರಣ ಅವರನ್ನು ಆರೋಪಮುಕ್ತರು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದ್ದರಿಂದ, ಅರ್ಜಿದಾರರು ಜಯಲಲಿತಾ ಅವರ ಕಾನೂನುಬದ್ದ ವಾರಸುದಾರರಾಗಿದ್ದು, ಅವರಿಗೆ ಎಲ್ಲ ಚಿನ್ನಾಭರಣಗಳನ್ನು ಹಸ್ತಾಂತರ ಮಾಡುವಂತೆ ನಿರ್ದೇಶನ ನೀಡಬೇಕು,” ಎಂದು ಕೋರಿದರು.
ಈ ವಾದ ದಾಖಲಿಸಿಕೊಂಡ ನ್ಯಾಯಪೀಠ, ನಗರದ ವಿಶೇಷ ನ್ಯಾಯಾಲಯದಿಂದ ತಮಿಳು ನಾಡು ಸರಕಾರಕ್ಕೆ ಬುಧವಾರದಿಂದ ನೀಡಬೇಕಾಗಿದ್ದ ಚಿನ್ನಾಭರಣಗಳ ಹಸ್ತಾಂತರ ಪ್ರಕ್ರಿಯೆಗೆ ತಡೆ ನೀಡಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.
ಜಯಲಲಿತಾ ಅವರ ನಿವಾಸದಿಂದ 7.040 ಗ್ರಾಂ ತೂಕದ 468 ಬಗೆಯ ಚಿನ್ನ ಹಾಗೂ ವಜ್ರ ಖಚಿತ ಆಭರಣಗಳು, 700 ಕೆ.ಜಿ. ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250ಶಾಲು, 12 ರೆಫ್ರಿಜರೇಟರ್, 10ಟಿವಿ ಸೆಟ್, 8 ವಿಸಿಆರ್, 1 ವಿಡಿಯೊ ಕ್ಯಾಮೆರಾ, 4 ಸಿಡಿ ಪ್ಲೇಯರ್, 2 ಆಡಿಯೊ ಡೆಕ್, 24 ಟೂ-ಇನ್ ಒನ್ ಟೇಪ್ ರೆಕಾರ್ಡರ್, 1,040 ವಿಡಿಯೊ ಕ್ಯಾಸೆಟ್, 3 ಐರನ್ ಲಾಕರ್, 1,93,202 ರೂ. ನಗದು ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ಅವುಗಳನ್ನು ತಮಿಳುನಾಡು ಸರಕಾರಕ್ಕೆ ಹಸ್ತಾಂತರ ಮಾಡಲು ವಿಶೇಷ ನ್ಯಾಯಾಲಯ ನಿರ್ಧರಿಸಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


