ತೆಲಂಗಾಣ ಮೂಲದ ಮೊಹಮ್ಮದ್ ಅಸ್ಫಾನ್ ಎಂಬ 30 ವರ್ಷದ ಯುವಕ ಉದ್ಯೋಗ ಅರಸಿ ರಷ್ಯಾ ತೆರಳಿದ್ದ. ಅಲ್ಲಿ ಆತನಿಗೆ ನೌಕರಿ ನೀಡುವುದಾಗಿ ಹೇಳಿ ರಷ್ಯಾ ಸೇನೆಯ ವ್ಯಾಗ್ನರ್ ಗ್ರೂಪ್ ಗೆ ಸೇರಿಸಿ ಮೋಸ ಮಾಡಲಾಗಿತ್ತು. ಇದೀಗ ಸಂಘರ್ಷದಲ್ಲಿ ಅವರು ಮೃತಪಟ್ಟಿದ್ದಾರೆ. ಪ್ರವಾಸ, ಉದ್ಯೋಗ ಅರಸಿ ರಷ್ಯಾಗೆ ತೆರಳಿರುವ ಭಾರತದ (India to Russia) ಯುವಕರನ್ನು ಅಲ್ಲಿನ ಅಧಿಕಾರಿಗಳು ಬಲವಂತವಾಗಿ ಅಥವಾ ಆಸೆ ತೋರಿಸಿ ಸೇನೆಗೆ ಸೇರಿಸಿಕೊಳ್ಳುತ್ತಿದ್ದು, ಇದರಿಂದ ಭಾರತದ ಯುವಕರು ಪ್ರಾಣ ಕಳೆದುಕೊಳ್ಳುವಂತಾಗಿದೆ ಎನ್ನುವ ಕೂಗು ಕೇಳಿಬಂದಿದೆ.
ಮೊಹಮ್ಮದ್ ಸಾವಿನ ಕುರಿತು ರಷ್ಯಾದಲ್ಲಿರುವ ಭಾರತದ ರಾಯಭಾರಿ ಕಚೇರಿ ಮಾಹಿತಿ ಒದಗಿಸಿದ್ದು, ಈತನನ್ನು ಕೂಡಾ ರಷ್ಯಾ ಅಧಿಕಾರಿಗಳು ಬಲವಂತದಿಂದ ಸೇನೆ ಸೇರಿಸಿದ್ದರು ಎನ್ನುವ ಆಘಾತಕಾರಿ ಮಾಹಿತಿಯನ್ನು ರಾಯಭಾರಿ ಕಛೇರಿಯ ಅಧಿಕಾರಿಗಳು ಹೊರ ಹಾಕಿದ್ದಾರೆ.
ಮೊಹಮ್ಮದ್ ಅಸ್ಫಾನ್ ಅವರು ಮೃತಪಟ್ಟಿರುವ ಅವರ ಕುಟುಂಬಸ್ಥರ ಜತೆ ಸಂಪರ್ಕದಲ್ಲಿದ್ದೇವೆ. ಮೊಹಮ್ಮದ್ ಅಸ್ಫಾನ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಕಳುಹಿಸುವ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ” ಎಂದು ರಾಯಭಾರಿ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದಕ್ಕೆ ಕೆಲ ದಿನಗಳ ಹಿಂದಷ್ಟೇ ರಷ್ಯಾದಲ್ಲಿ ಮೊಹಮ್ಮದ್ ಅಸ್ಫಾನ್ ಸಂಕಷ್ಟಕ್ಕೆ ಸಿಲುಕಿರುವ ಕುರಿತು ಆತನ ಕುಟುಂಬಸ್ಥರು ರಕ್ಷಣೆಗಾಗಿ ಕೇಂದ್ರ ಸರ್ಕಾರವನ್ನು ಮನವಿ ಮಾಡಿತ್ತು. ಉದ್ಯೋಗ ಮಾಡಲೆಂದು ರಷ್ಯಾಗೆ ತೆರಳಿದ ಮೊಹಮ್ಮದ್ ಅಸ್ಫಾನ್ ನನ್ನು ಬಲವಂತವಾಗಿ ಸೇನೆಗೆ ಸೇರಿಸಿಕೊಳ್ಳಲಾಗಿತ್ತು. ಆತನು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ದಯಮಾಡಿ ಮಗನನ್ನು ರಕ್ಷಿಸಿ ಎಂದು ಆತನ ಕುಟುಂಬಸ್ಥರು ಬೇಡಿದ್ದರು. ಭಾರತದ ವಿದೇಶಾಂಗ ಸಚಿವಾಲಯವೂ ಭಾರತೀಯರ ರಕ್ಷಣೆಯ ಭರವಸೆ ನೀಡಿತ್ತು.
ಆದರೆ ರಕ್ಷಣೆ ತಲುಪುವ ಮೊದಲೇ ಮೊಹಮ್ಮದ್ ಅಸ್ಫಾನ್ ಯುದ್ಧಕ್ಕೆ ಬಲಿಯಾಗಿದ್ದಾನೆ. ಅಸ್ಫಾನ್ ಸಾವು, ರಷ್ಯಾದಲ್ಲಿ ಸಂಭವಿಸಿದ 2ನೇ ಭಾರತೀಯನ ಸಾವಾಗಿದೆ. ರಷ್ಯಾ ಮತ್ತು ಉಕ್ರೇನ್ ಗಡಿಯಲ್ಲಿ ಈ ಹಿಂದೆ ನಡೆದ ಒಂದು ದಾಳಿಯಲ್ಲಿ ಭಾರತದ 23 ವರ್ಷದ ಯುವಕ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮೃತನನ್ನು ಗುಜರಾತ್ ನ ಸೂರತ್ ಜಿಲ್ಲೆಯ ಹೇಮಿಲ್ ಅಶ್ವಿನ್ ಭಾಯಿ ಮಂಗುಕಿಯಾ ಎಂದು ಗುರುತಿಸಲಾಗಿದೆ. ಆತ ರಷ್ಯಾ ಸೇನೆಯ ಸಹಾಯಕನಾಗಿ ಸೇರ್ಪಡೆಯಾಗಿದ್ದ. ಈತನನ್ನು ಸೇನೆಯ ಏಜೆಂಟ್ ಆಗಿ ಕೆಲಸ ಮಾಡಿಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


