ತುಮಕೂರು: ಪದವಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಉದ್ಯೋಗ ಕೌಶಲದ ಕುರಿತು ಸಮಗ್ರ ಮಾಹಿತಿ ನೀಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ.ರಾಮಕೃಷ್ಣರೆಡ್ಡಿ ಕರೆ ನೀಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ವಾದ್ವಾನಿ ಫೌಂಡೇಶನ್ ಸಹಭಾಗಿತ್ವದಲ್ಲಿ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಗಾರ ಹಾಗೂ ಭೋದಕರಿಗೆ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಬರುವಂತ ಸರ್ಕಾರಗಳು ಶಿಕ್ಷಣಕ್ಕೆ ಹಾಗೂ ಉದ್ಯೋಗಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡುತ್ತಾ ಬಂದಿವೆ. ವಿಶೇಷವಾಗಿ ಪದವಿ ಮುಗಿಸಿದ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಅಲೆಯುವುದನ್ನು ತಪ್ಪಿಸಲು ಉದ್ಯೋಗ ಕೌಶಲ್ಯ ತರಬೇತಿ ನೀಡುವುದು ಅಗತ್ಯವಿದೆ. ಹಾಗಾಗಿ ಕಾಲೇಜು ಶಿಕ್ಷಣ ಇಲಾಖೆಯು ವಾದ್ವಾನಿ ಫೌಂಡೇಶನ್ ಜೊತೆ ಸೇರಿಕೊಂಡು ರಾಜ್ಯದ ಎಲ್ಲಾ ಪದವಿ ಕಾಲೇಜುಗಳಲ್ಲಿಯೂ ಉದ್ಯೋಗ ಕೌಶಲ್ಯದ ಕುರಿತು ಬೋಧಕರಿಗೆ ತರಬೇತಿಯನ್ನು ನೀಡಲಾಗುತ್ತಿದ್ದು, ಕಲಿಯುವಂತ ಪದವಿ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಉದ್ಯೋಗ ಕೌಶಲ್ಯದ ಮಹತ್ವವನ್ನು ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕಾಲಕಾಲಕ್ಕೆ ತಕ್ಕಂತೆ ಕಲಿಸುವಂತಹ ವಿಷಯಗಳಲ್ಲೂ ಬದಲಾವಣೆಯಾಗುತ್ತಾ ಹೋಗುತ್ತದೆ. ಸರ್ಕಾರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಲಾಖೆ ನಡೆದುಕೊಳ್ಳುತ್ತಿದೆ. ಇಲಾಖೆಯಲ್ಲಿ ಹಣದ ಕೊರತೆಯಿಲ್ಲ. ಸಣ್ಣ-ಪುಟ್ಟ ಸಮಸ್ಯೆಗಳು ಪದವಿ ಕಾಲೇಜುಗಳಲ್ಲಿ ಎದುರಾಗುತ್ತವೆ. ಅವುಗಳನ್ನು ನಿಭಾಯಿಸುವ ಶಕ್ತಿಯೂ ನಮ್ಮಲ್ಲಿರುತ್ತದೆ ಅದಕ್ಕಾಗಿ ನಾವು ದೃಡ ಸಂಕಲ್ಪ ಮಾಡಬೇಕಿದೆ. ಸರ್ಕಾರವು ಇಲಾಖೆಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದ್ದು, ಅಷ್ಟೇ ನಿಷ್ಟೆಯಿಂದ ಬೋಧಕರು ಕೂಡ ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಮಾಡಬೇಕು. ಅದಾಗದಿದ್ದರೆ ನಮಗೆ ನಾವು ಮಾಡಿಕೊಂಡ ದ್ರೋಹ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಲಾಖೆಯು ವಿದ್ಯಾರ್ಥಿಗಳ ಹಿತಕಾಯುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಖಾಸಗಿ ಪದವಿ ಕಾಲೇಜುಗಳನ್ನು ಹಿಂದಿಕ್ಕುವ ಕೆಲಸವನ್ನು ಸರ್ಕಾರಿ ಪದವಿ ಕಾಲೇಜುಗಳು ಮಾಡಬೇಕಿದೆ ಎಂದರು.
ವಿಶೇಷ ಶಿಕ್ಷಣಾಧಿಕಾರಿ ಶ್ರೀಕಾಂತ್ ಮಾತನಾಡಿ, ರಾಜ್ಯದ ಪ್ರತಿಯೊಂದು ಕಾಲೇಜಿನಲ್ಲಿಯೂ ಉದ್ಯೋಗ ಕೌಶಲ್ಯ ಮಾಹಿತಿ ತಲುಪಿಸುವ ಉದ್ದೇಶದಿಂದ ಪದವಿ ಕಾಲೇಜಿನ ಇಬ್ಬರು ಬೋಧಕರಿಗೆ ಈ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ವಾಗ್ದಾವಿ ಫೌಂಡೇಶನ್ ತರಬೇತುದಾರ ವಿನಯ್ ಮಾತನಾಡಿ, ನಮ್ಮ ಸಂಸ್ಥೆಯು ನಿರುದ್ಯೋಗ ಸಮಸ್ಯೆಗೆ ಪರಿಹಾರ ಸೂಚಿಸುವಂತ ಕೆಲಸವನ್ನು ಮಾಡುತ್ತಾ ಬಂದಿದೆ. ಹಾಗೆಯೆ ಸರ್ಕಾರಕ್ಕೆ ಉದ್ಯೋಗ ಕೌಶಲ್ಯದ ಬಗ್ಗೆಯೂ ಮಾಹಿತಿ ನೀಡಲಾಗಿತ್ತು. ಅದರಂತೆ ಇಲಾಖೆ ನಮಗೆ ಸ್ಪಂದಿಸಿ ತರಬೇತಿ ನೀಡಲು ಒಪ್ಪಿದೆ. ಪದವಿ ಕಲಿತ ಯುವಕರು ಸ್ವಯಂ ಉದ್ಯೋಗ ಮಾಡಿಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ತರುನ್ನುಂ ನಿಖತ್ ಎಸ್ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಸರ್ಕಾರ ಹಾಗೂ ಇಲಾಖೆಯು ಉದ್ಯೋಗ ಕೌಶಲ್ಯ ಕಾರ್ಯಕ್ರಮವನ್ನು ರೂಪಿಸಿರುವುದು ಒಳ್ಳೆಯದು. ಇದು ದೂರದೃಷ್ಟಿಯ ಕಾರ್ಯಕ್ರಮವಾಗಿದೆ. ಬೋಧಕರು ತರಬೇತಿಯಲ್ಲಿ ನೀಡುವ ಅಂಶಗಳನ್ನು ಅರಿತುಕೊಂಡು ತಮ್ಮ ತಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಈ ಯೋಜನೆಯ ಲಾಭಂಶವನ್ನು ತಿಳಿಸುವ ಕೆಲಸ ಮಾಡಬೇಕು ಎಂದರು.
ವಿದ್ಯಾರ್ಥಿಗಳ ಭವಿಷ್ಯದ ಮಹತ್ವ ಸಾರುವ ತರಬೇತಿ ಕಾರ್ಯಗಾರವನ್ನು ಮಾಡಲು ನಮಗೆ ಸಿಕ್ಕ ಅವಕಾಶವನ್ನು ನಾವೆಲ್ಲಾ ಉತ್ತಮವಾಗಿ ಬಳಸಿಕೊಂಡು ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಯಶಸ್ವಗೊಳಿಸೋಣ. ಉದ್ಯೋಗ ಕೌಶಲ್ಯದಿಂದ ನಿರುದ್ಯೋಗ ನಿರ್ಮೂಲನೆಯಾಗಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಉದ್ಯೋಗ ಕೌಶಲ್ಯದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಮಂಜುನಾಥ್, ಹರಿಬಾಲಚಂದ್ರನ್, ಕೆ.ಸಿ.ಬಸವರಾಜ್, ಮಾಸ್ಟರ್ ಟ್ರೈನರ್ ಸ್ವಾತಿ ಇದ್ದರು. ಸ್ವಾಗತವನ್ನು ಪ್ರೊ. ಗಂಗಾಧರ, ವಂದನಾರ್ಪಣೆಯನ್ನು ಡಾ.ರೇಣುಕ ನೆರವೇರಿಸಿಕೊಟ್ಟರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚು ಪ್ರವೇಶ ಪಡೆಯುತ್ತಿದ್ದಾರೆ. ಫಲಿತಾಂಶದಲ್ಲಿ ಖಾಸಗಿ ಕಾಲೇಜಿಗೆ ಸೆಡ್ಡು ಹೊಡೆದು ಸರ್ಕಾರಿ ಕಾಲೇಜುಗಳನ್ನು ಮುನ್ನಲೆಗೆ ತರುವ ಕೆಲಸವನ್ನು ಬೋಧಕರು ಮಾಡಬೇಕು. ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರೂ ಕ್ಷೇತ್ರದ ಕೆಲಸವನ್ನು ತಮ್ಮ ಮನೆಯ ಕೆಲಸವೆಂದು ಭಾವಿಸಿ ತಮಗೆ ಸಿಕ್ಕಿರುವ ಅವಕಾಶವನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಮುಂದೆ ಬರಬೇಕು.
–ಡಾ.ಕೆ.ರಾಮಕೃಷ್ಣರೆಡ್ಡಿ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ