ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪುವ ಆತಂಕ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೂ ಎದುರಾಗಿದ್ದು ಈ ಕುರಿತು ಮಾತನಾಡುವ ವೇಳೆ ಭಾವುಕರಾದರು.
ಬಿಜೆಪಿ ಟಿಕೆಟ್ ಕೈತಪ್ಪುವ ಸಾಧ್ಯತೆ ಎಂದು ವರದಿಯಾಗುತ್ತಿರುವ ಹಿನ್ನೆಲೆ ಈ ಕುರಿತು ಮಾತನಾಡಿದ ಸಂಸದ ನಳೀನ್ ಕುಮಾರ್ ಕಟೀಲ್, ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸುವುದು ನಮ್ಮ ಪಕ್ಷದ ವಿಶೇಷತೆ. ಪಕ್ಷದ ರಾಷ್ಟ್ರೀಯ ನಾಯಕರು ಎಲ್ಲಾ ಯೋಚನೆ ಮಾಡಿ ಆಯ್ಕೆ ಮಾಡುತ್ತಾರೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ದ. ಪಕ್ಷ ಕಸ ಗುಡಿಸಿ ಎಂದರೂ ಗುಡಿಸುತ್ತೇನೆ. ನನಗೆ ಮೂರು ಬಾರಿ ಅವಕಾಶ ನೀಡಿದ್ದಾರೆ . ಪಕ್ಷ ನಿಂತ ನೀರಾಗಬಾರದು. ಹೊಸಬರು ಬರ್ತಾ ಇರಬೇಕು ಚಲಾವಣೆ ಆಗುತ್ತಿರಬೇಕು ಎಂದು ಹೇಳಿದರು.
ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ನಾವೆಲ್ಲಾ ಬದ್ಧರಾಗಿರುತ್ತೇವೆ. ಯಾರೇ ಅಭ್ಯರ್ಥಿ ಆದರೂ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆಂಬುದು ನಮ್ಮ ಗುರಿ. ರಾಷ್ಟ್ರೀಯ ನಾಯಕರ ಯೋಚನೆಗಳಿಗೆ ಬದ್ಧರಾಗಿ ಕೆಲಸ ಮಾಡುವವರು ನಾವು ಎಂದು ನಳಿನ್ ಹೇಳಿದರು.
ಬಿಜೆಪಿಯಲ್ಲಿ ಯಾರನ್ನೂ ತುಳಿಯುವುದಿಲ್ಲ. ಅವಕಾಶ ಸಿಕ್ಕಾಗ ನನಗೆ ನ್ಯಾಯ ಸಿಕ್ಕಿದೆ. ಅವಕಾಶ ಸಿಕ್ಕಿಲ್ಲ ಅಂದಾಗ ಅನ್ಯಾಯ ಆಗಿದೆ ಎಂದು ಹೇಳುವ ಹಕ್ಕು ನಮಗಿಲ್ಲ. ಎಲ್ಲರನ್ನೂ ಪಾರ್ಟಿ ಬೆಳೆಸಿದೆ. ಟಿಕೆಟ್ ಸಿಕ್ಕಿಲ್ಲ ಎಂದ ಕೂಡಲೇ ಅಂಥವರನ್ನು ಕೈಬಿಟ್ಟಿದೆ ಎಂದು ಅರ್ಥ ಅಲ್ಲ. ಮುಂದಕ್ಕೆ ಬಹಳಷ್ಟು ಅವಕಾಶ ಸಿಗಬಹುದು. ನಾವು ಸಂಘಟನೆ ಕಾರ್ಯ ಮಾಡುವವರು, ಹೀಗಾಗಿ ಯಾವುದೇ ಅಸಮಾಧಾನ ಇಲ್ಲ ಎಂದು ನಳೀನ್ ಕುಮಾರ್ ಕಟೀಲ್ ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


