ತುಮಕೂರು: ಜಿಲ್ಲೆ ಸಿರಾ ತಾಲ್ಲೂಕಿನ ಮೆಳೆಕೋಟೆ ಸರ್ಕಾರಿ ಶಾಲೆಯಲ್ಲಿ ಇಂದು ಶಾಲಾ ಸಮಯದಲ್ಲಿ ಒಂದನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಅಗ್ನಿ ಅವಘಡಕ್ಕೆ ತುತ್ತಾಗಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದ್ದು, ಈ ಘಟನೆಯನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ.
ಶಾಲಾ ಸಮಯದಲ್ಲಿ ಮಕ್ಕಳ ರಕ್ಷಣೆಯ ಕುರಿತು ನಿರ್ಲಕ್ಷ್ಯ ವಹಿಸಿದ ಶಿಕ್ಷಕರ ವಿರುದ್ದ ಇಲಾಖಾ ನಿಯಮಾನುಸಾರ ಶಿಸ್ತು ಕ್ರಮ ಕೈಗೊಂಡು ಆಯೋಗಕ್ಕೆ ವರದಿ ನೀಡಲು ಸಿರಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆಯೋಗ ಸೂಚಿಸಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ.ತಿಪ್ಪೇಸ್ವಾಮಿ ಕೆ.ಟಿ. ಅವರು ನಮ್ಮತುಮಕೂರಿಗೆ ತಿಳಿಸಿದ್ದಾರೆ.
ಅಲ್ಲದೇ ನಾಳೆ ಸ್ಥಳಕ್ಕೆ ಭೇಟಿ ನೀಡಿ ವರದಿ ಸಿದ್ದಪಡಿಸಿ ಆಯೋಗಕ್ಕೆ ಸಲ್ಲಿಸಲು ತುಮಕೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಸದ್ಯ ಮಗು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಾಳೆ ಮಗುವನ್ನು ಭೇಟಿ ಮಾಡಲಿದ್ದೇನೆ. ನಾಳಿನ ಭೇಟಿ ಹಾಗೂ ಬಂದ ವರದಿಗಳ ಮೇಲೆ ಮುಂದಿನ ಕ್ರಮಕ್ಕೆ ಶಿಪಾರಸ್ಸು ಮಾಡಲಾಗುವುದು ಎಂದು ಡಾ.ತಿಪ್ಪೇಸ್ವಾಮಿ ಕೆ.ಟಿ. ತಿಳಿಸಿದ್ದಾರೆ.
ಎಷ್ಟೇ ಸುತ್ತೋಲೆ ಬಂದರೂ, ಅರಿವು ಮೂಡಿಸಿದರು ಕೂಡ ಶಾಲೆಗಳಲ್ಲಿ ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿರುವುದು ವಿಷಾದನೀಯ. ಜವಾಬ್ದಾರಿ ಹೊತ್ತವರು ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ಅಸಹನೀಯ ಎಂದು ಅವರು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296