- ನೈಜ್ಯ ಹೋರಾಟಗಾರರ ವೇದಿಕೆ ಖಂಡನೆ
ತುಮಕೂರು: ಬ್ಯಾಂಕ್ ನಲ್ಲಿದ್ದ ಡೆಪಾಸಿಟ್ ಹಣಕ್ಕಾಗಿ ದೊಡ್ಡಮ್ಮ ಇಸ್ತ್ರಿ ಪೆಟ್ಟಿಗೆಯಿಂದ ಐದನೇ ತರಗತಿಯಲ್ಲಿ ಓದುತ್ತಿದ್ದ ಮಗಳ ತೊಡೆ ಸುಟ್ಟಿರುವ ಘಟನೆ ನಡೆದಿದೆ ಘಟನೆ ಅಂಧ್ರ ಪ್ರದೇಶದ ಮಡಕಶಿರಾ ತಾಲೂಕಿನ ನಿದ್ರಘಟ್ಟೆ ಗ್ರಾಮದಲ್ಲಿ ನಡೆದಿದೆ.
ಮಧುಗಿರಿ ತಾಲೂಕಿನ ಪೂಜಾರಹಳ್ಳಿ ಗ್ರಾಮದ ನಿವಾಸಿಯಾಗಿರುವ ಬಾಲಕಿ ಲಕ್ಷ್ಮೀಗೆ ದೊಡ್ಡಮ್ಮ ನರಸಮ್ಮ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ಈ ನಡುವೆ ಲಕ್ಷ್ಮಿ ಎಂಬ ಬಾಲಕಿಯ ತಾಯಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ತನ್ನ ಮಗಳಿಗಾಗಿ ತಾಯಿ 4 ಲಕ್ಷ ಹಣ ಡಿಪಾಸಿಟ್ ಮಾಡಿದ್ದರು. ಈ ಹಣವನ್ನು ಲಪಟಾಯಿಸಲು ಬಾಲಕಿಗೆ ದೊಡ್ಡಮ್ಮ ಹಣಕ್ಕಾಗಿ ಬಾಲಕಿಯ ತೊಡೆಯನ್ನು ಇಸ್ತ್ರಿಪೆಟ್ಟಿಗೆಯಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾಳೆ ಎನ್ನಲಾಗಿದೆ.
ಇನ್ನು ಬಾಲಕಿ ಲಕ್ಷ್ಮೀ ಐದನೇ ತರಗತಿ ಓದುತ್ತಿದ್ದಾಳೆ. ಆಕೆಯ ಪರೀಕ್ಷೆ ನಡೆಯುತ್ತಿದ್ದು, ಸೋಮವಾರ ಪರೀಕ್ಷೆಗೆ ಹಾಜರಾಗಿರಲಿಲ್ಲ. ಹೀಗಾಗಿ ಶಿಕ್ಷಕರು ಮತ್ತು ಸಂಬಂಧಿಕರು ಬಾಲಕಿಯನ್ನು ಊರಿಗೆ ಕರೆಸಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಬಡವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನೈಜ್ಯ ಹೋರಾಟಗಾರರ ವೇದಿಕೆ ಖಂಡನೆ:

ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳವಾಗುತ್ತಿರುವ ಬಗ್ಗೆ ಸಾಮಾಜಿಕ ಹೋರಾಟಗಾರರು ಹಾಗೂ ನೈಜ್ಯ ಹೋರಾಟಗಾರರ ವೇದಿಕೆಯ ಹೆಚ್.ಎಂ.ವೆಂಕಟೇಶ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ನಮ್ಮತುಮಕೂರಿಗೆ ಪ್ರತಿಕ್ರಿಯೆ ನೀಡಿರುವ ಅವರು, ತುಮಕೂರು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಆಗಾಗ ದೌರ್ಜನ್ಯಗಳು ನಡೆಯುತ್ತಲೇ ಇದೆ. ತಾಯಿ ಇಲ್ಲದ ಹೆಣ್ಣು ಮಗುವಿನ ಮೇಲೆ ಹಣ, ಆಸ್ತಿ, ಒಡವೆಗಳನ್ನು ಲಪಟಾಯಿಸಲು ದೈಹಿಕವಾಗಿ ದೌರ್ಜನ್ಯ ನಡೆಯುತ್ತಿರುವುದನ್ನು ನಾನು ಸಿನಿಮಾಗಳಲ್ಲಿ ನೋಡುತ್ತಿದ್ದೆ. ಆದರೆ ಅದು ಈಗ ವಾಸ್ತವವಾಗಿ ನಡೆಯುತ್ತಿರುವುದು ದುರದೃಷ್ಟಕರ ಮತ್ತು ನಾಗರೀಕ ಸಮಾಜವೂ ಇದನ್ನು ಒಪ್ಪುವುದಿಲ್ಲ ಎಂದರು.
ಇದಕ್ಕೆ ಮುಖ್ಯ ಕಾರಣ ಬಡತನ ಜೊತೆಗೆ ದುರಾಸೆ. ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ತನ್ನ ತಾಯಿ ಇಟ್ಟ ಹಣವನ್ನು ಲಪಟಾಯಿಸಲು ದೊಡ್ಡಮ್ಮ ಮತ್ತು ದೊಡ್ಡಮ್ಮನ ಮಗ ಅತ್ಯಂತ ಹೀನಾಯವಾಗಿ ದೌರ್ಜನ್ಯ ಮಾಡಿರುವುದರಿಂದ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಾಗರೀಕ ಸಮಾಜದಲ್ಲಿ ಇಂತಹ ಪ್ರಕರಣಗಳು ನಡೆಯಬಾರದು. ಬಡ ಕುಟುಂಬಗಳ ಮಹಿಳೆಯರು ಇಂತಹ ದೌರ್ಜನ್ಯ ಎಸಗಿದಾಗ ಕಠಿಣ ಶಿಕ್ಷೆಯಾಗುತ್ತದೆ ಎಂಬ ಸಾಮಾನ್ಯ ಜ್ಞಾನವೇ ಇಲ್ಲದಿರುವುದರಿಂದ ಇಂತಹ ಪ್ರಕರಣಗಳು ನಡೆಯುತ್ತವೆ. ಅನಕ್ಷರಸ್ಥರು ಬಡವರು ಮತ್ತು ಅಮಾಯಕರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುವ ಗುರುತರ ಜವಾಬ್ದಾರಿಯನ್ನು ಪೊಲೀಸ್ ಇಲಾಖೆ ವಹಿಸಬೇಕಾಗಿದೆ ಎಂದು ಹೆಚ್.ಎಂ.ವೆಂಕಟೇಶ್ ಸಲಹೆ ನೀಡಿದ್ದಾರೆ.