ಆರ್ ಸಿಬಿ ಅಭಿಮಾನಿಗಳು ತುಂಬಾನೇ ಜೋಶ್ ನಲ್ಲಿದ್ದಾರೆ. ಈ ಬಾರಿ ಕಪ್ ನಮ್ಮದೆ ಎನ್ನುವ ಕೂಗು ಜೋರಾಗಿಯೆ ಇದೆ. ಹೌದು, ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ನ(ಐಪಿಎಲ್) 17ನೇ ಆವೃತ್ತಿಗೆ ಕೇವಲ ಹತ್ತು ದಿನಗಳು ಮಾತ್ರ ಬಾಕಿ ಉಳಿದಿದ್ದು, ವಿಶ್ವದ ಶ್ರೀಮಂತ ಟಿ20 ಲೀಗ್ ಆರಂಭಕ್ಕಾಗಿ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ. ಇದೇ ಮಾರ್ಚ್ 22ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುವ ರೋಚಕ ಉದ್ಘಾಟನಾ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಮತ್ತು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ತಂಡಗಳು ಮುಖಾಮುಖಿಯಾಗಲಿವೆ. ಈ ವೈಭವದ ಕ್ಷಣಕ್ಕೆ ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ.
ಸದ್ಯ ಆರ್ ಸಿಬಿ ಬಿಡುಗಡೆ ಮಾಡಿದ ಪ್ರೊಮೊವೊಂದು ಇದೀಗ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಮೂಡಿಸುವಂತೆ ಮಾಡಿದೆ. ತಲೆಗೆ ಹುಳ ಬಿಟ್ಟಂಗಾಗಿದೆ. ಸಮಾರಂಭದ ಪ್ರೊಮೊವೊಂದು ಬಿಡುಗಡೆಯಾಗಿದ್ದು, ಕಂಬಳದ ಕೋಣಗಳೊಂದಿಗೆ ಸ್ಯಾಂಡಲ್ ವುಡ್ ನಟ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ಪ್ರೊಮೋ ನೋಡಿ ಕ್ರೀಡಾ ಅಭಿಮಾನಿಗಳಂತು ಸಕತ್ ಥ್ರಿಲ್ ಆಗಿದ್ದಾರೆ.
ಆರ್ ಸಿಬಿ ತನ್ನ ಅಭಿಯಾನ ಆರಂಭಿಸುವ ಮುನ್ನ ಪೂರ್ವಭಾವಿಯಾಗಿ ಅಭಿಮಾನಿಗಳಿಗಾಗಿ ಈ ಸಲವೂ ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಿದೆ. ಕಳೆದೆರಡು ವರ್ಷಗಳಿಂದ ಆರ್ ಸಿಬಿ ಅನ್ಬಾಕ್ಸ್ ಹೆಸರಿನಲ್ಲಿ ನಡೆಯುತ್ತ ಬಂದಿರುವ ಕಾರ್ಯಕ್ರಮ ಈ ಬಾರಿ ಮಾರ್ಚ್ 19ರಂದು ನಿಗದಿಯಾಗಿದೆ. ಪ್ರೊಮೊದಲ್ಲಿ ಕಂಬಳದ ಕೋಣಗಳೊಂದಿಗೆ ನಟ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದು, ಏನಿದು? ಎಂದು ಎಲ್ಲರೂ ಪ್ರೊಮೋದ ಗುಂಗಿನಲ್ಲಿದ್ದಾರೆ.
ಆರ್ ಸಿಬಿ ಅನ್ ಬಾಕ್ಸ್ ನಲ್ಲಿ ತಂಡದ ಹೊಸ ಜೆರ್ಸಿಯನ್ನೂ ಅನಾವರಣಗೊಳಿಸಲಾಗುತ್ತಿದ್ದು, ಜತೆಗೆ ಅಭಿಮಾನಿಗಳ ಎದುರು ಹಲವು ಅಚ್ಚರಿಯ ಮತ್ತು ವಿಶೇಷ ಘೋಷಣೆಗಳನ್ನು ಮಾಡಲಾಗುವುದು ಎಂದು ಆರ್ ಸಿಬಿ ತಂಡ ಈಗಾಗಲೇ ತಿಳಿಸಿದೆ. ಕಾಂತಾರ ಸಿನೆಮಾ ಖ್ಯಾತಿಯ ನಟ ರಿಷಬ್ ಶೆಟ್ಟಿ ಅವರು ಈ ಪ್ರೋಮೊದಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ಕಂಬಳದ ಕೋಣಗಳ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಬರೆದಿದೆ. ಈ ವೇಳೆ ರಿಷಬ್ ಶೆಟ್ಟಿ ಬೆಂಗಳೂರು ಹೆಸರಿನ ಕೋಣವನ್ನು ಇದು ಬೇಡ ಭಟ್ರೆ. ತೆಗೆದುಕೊಂಡು ಹೋಗಿ ಇದನ್ನು ಎಂದು ಹೇಳಿ ಅರ್ಥ ಆಯ್ತಾ ಎಂದು ಹೇಳುತ್ತಾರೆ. ರಾಯಲ್ ಚಾಲೆಂಜರ್ಸ್ ಮುಂದೆ ಬೆಂಗಳೂರು ಎನ್ನುವ ಹೆಸರು ಬದಲಾಗುವ ಸಾಧ್ಯತೆ ಎನ್ನುವ ಹಾಗೆ ಈ ಪ್ರೋಮೋದಲ್ಲಿ ಕಂಡು ಬಂದಿದೆ. ಆದರೆ ಈ ಪ್ರೊಮೊ ನೋಡಿದ ಅಭಿಮಾನಿಗಳು ಏನಪ್ಪಾ? ನಮಗೆ ಅರ್ಥವಾಗ್ತಿಲ್ಲ.., ನೀವೇ ಹೇಳಿ…, ಹೆಸರು ಬದಲಾವಣೆ ಮಾಡುತ್ತೀರಾ ಎಂದು ಕಮೆಂಟ್ ಮಾಡುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


