ಕಾಂಗ್ರೆಸ್ ನಿಂದ ಘರ್ ವಾಪ್ಸಿ ಆಗಿರುವ ಬಿಜೆಪಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಇದೀಗ ಬೆಳಗಾವಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೀಗ ಈ ಬೆನ್ನಲ್ಲೇ ಅವರಿಗೆ ಬಿಗ್ ಶಾಕ್ ಎದುರಾಗಿದೆ.
ಹೌದು, ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಇರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್ ಹೆಸರು ಕೂಡ ಇದ್ದು, ಹೈಕಮಾಂಡ್ ಕೂಡ ಶೆಟ್ಟರ್ ಸ್ಪರ್ಧೆಗೇ ಹೆಚ್ಚು ಒಲವು ತೋರಿದೆ ಎನ್ನಲಾಗುತ್ತಿದೆ. ಆದರೆ ಈ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯ ಬಿಜೆಪಿ ಘಟಾನುಘಟಿ ನಾಯಕರು ಹೊರಗಿನ ಅಭ್ಯರ್ಥಿಗಳ ಸ್ಪರ್ಧೆಗೆ ಅವಕಾಶವಿಲ್ಲ. ಸ್ಥಳೀಯರಿಗೆ ಆದ್ಯತೆ ನೀಡಿ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇಷ್ಟೇ ಅಲ್ಲದೆ ಯಾವ ಕಾರಣಕ್ಕೂ ಸ್ಥಳೀಯ ನಾಯಕರನ್ನು ಹೊರತುಪಡಿಸಿ ವಲಸಿಗರಿಗೆ ಅವಕಾಶ ನೀಡದಂತೆ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ.
ಅಂದಹಾಗೆ ನಿನ್ನೆ ದಿನ ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಅವರ ನಿವಾಸದಲ್ಲಿ ಶುಕ್ರವಾರ ಬಿಜೆಪಿ ನಾಯಕರ ಮಹತ್ವದ ಸಭೆ ನಡೆದಿದ್ದು ಹೊರಗಿನ ಅಭ್ಯರ್ಥಿಗಳಿಗೆ ಪಕ್ಷ ಮಣೆಹಾಕದೇ ಸ್ಥಳೀಯರಿಗೆ ಟಿಕೆಟ್ ನೀಡಬೇಕು, ಹೊರಗಿನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ಪಕ್ಷದೊಳಗೆ ಎದುರಾಳಿಗಳು ಹೆಚ್ಚಾಗಬಹುದು. ಹೀಗಾಗಿ ಸ್ಥಳೀಯರಿಗೇ ಆದ್ಯತೆ ನೀಡಬೇಕು ಎಂಬ ಸಂದೇಶವನ್ನು ವರಿಷ್ಠರಿಗೆ ನೀಡಿದ್ದಾರೆ. ಜೊತೆಗೆ ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರು ಈ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದು, ಬಿಜೆಪಿ ಹೈಕಮಾಂಡ್‌ಗೂ ಇದು ನುಂಗಲಾರದ ತುತ್ತಾಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಜಗದೀಶ ಶೆಟ್ಟರ್ ಇಲ್ಲವೇ ಮಾಜಿ ಸಚಿವ ಮುರಗೇಶ ನಿರಾಣಿ ಅವರಿಗೆ ಟಿಕೆಟ್ ಸಿಗುತ್ತದೆ ಎಂಬ ಸುದ್ದಿ ಬೆನ್ನಲ್ಲೇ ಈ ಸಭೆ ನಡೆದಿದ್ದು, ಮುಂದೆ ವರಿಷ್ಠರು ಏನು ತೀರ್ಮಾನ ಮಾಡುತ್ತಾರೆ ಎಂದು ಕಾದುನೋಡಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


