ತುಮಕೂರು: ಇಂದು ಸರ್ಕಾರಿ ಪದವಿ ಕಾಲೇಜುಗಳು ಪರಿಣಿತ ಅಧ್ಯಾಪಕರನ್ನು ಒಳಗೊಂಡಿದ್ದು ಇದರಿಂದ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಗಣನೀಯವಾಗಿ ಪ್ರವೇಶಾತಿಯಲ್ಲಿ ಹೆಚ್ಚಾಗಿರುವುದು ಕಂಡು ಬಂದಿರುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಎಸ್.ಬಿ.ಅಪ್ಪಾಜಿಗೌಡ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ಹಾಗೂ ವಾದ್ವಾನಿ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉದ್ಯೋಗ ಕೌಶಲ ತರಬೇತಿ ಕಾರ್ಯಾಗಾರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ತರಬೇತಿಯಲ್ಲಿ ಪಡೆದ ಉದ್ಯೋಗ ಕೌಶಲ್ಯದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸುವ ಮೂಲಕ ತರಬೇತಿಯ ಉದ್ದೇಶವನ್ನು ಸಾರ್ಥಕಗೊಳಿಸಬೇಕು. ವಿದ್ಯಾರ್ಥಿಗಳಿಗೆ ವಿವಿಧ ಉದ್ಯೋಗ ಕೌಶಲ್ಯದ ಮಾಹಿತಿಯನ್ನು ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ಬೋಧಕರದ್ದು ಎಂದರು.
ರಾಜ್ಯದಲ್ಲಿ ಶೇ.2 ರಷ್ಟು ಮಾತ್ರ ಸರ್ಕಾರಿ ಉದ್ಯೋಗಗಳು ಲಭ್ಯವಿರುತ್ತವೆ. ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಸಿಗುವಂತಹ ಉದ್ಯೋಗದ ಬಗ್ಗೆಯೂ ಬೋಧಕರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. ಉದ್ಯೋಗ ಕೌಶಲ್ಯದಿಂದ ಸಾಕಷ್ಟು ಯುವಕರು ಉದ್ಯೋಗವನ್ನು ಕಂಡುಕೊಂಡು ಜೀವನ ಸಾಗಿಸಬಹುದು. ಈ ನಿಟ್ಟಿನಲ್ಲಿ ಸರ್ಕಾರ ಉಪಯುಕ್ತ ಯೋಜನೆಗೆ ಹಸಿರುನಿಶಾನೆ ತೋರಿಸಿದ್ದು ಯುವಪೀಳಿಗೆ ಇದರತ್ತ ಕಣ್ಣಾಯಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜು ಶಿಕ್ಷಣ ಇಲಾಖೆ ವಿಶೇಷಾಧಿಕಾರಿ ಕೆ.ಸಿ.ಬಸವರಾಜ್ ಮಾತನಾಡಿ, ಇಲಾಖೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಲವು ಉಪಯುಕ್ತ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಇಲಾಖೆಯಲ್ಲಿರುವ ಹಿರಿಯು ಅಧಿಕಾರಿಗಳು ಈ ಕ್ಷೇತ್ರವನ್ನು ಹೆಚ್ಚಿನದಾಗಿ ಬೆಳೆಸುವ ಸದುದ್ದೇಶದಿಂದ ಕಾಲೇಜುಗಳಲ್ಲಿ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತಿದ್ದು ಅಧ್ಯಾಪಕ ವೃಂದ ಹಾಗೂ ಸಿಬ್ಬಂದಿಗಳು ವ್ಯವಸ್ಥಿತವಾಗಿ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಹಾಗೂ ತರಬೇತಿ ನೀಡುವ ಮೂಲಕ ಇಲಾಖೆಗೆ ಗೌರವ ಹೆಚ್ಚಿಸುವ ಕಾರ್ಯ ಮಾಡಬೇಕಿದೆ ಎಂದರು.
ಶಿಬಿರಾರ್ಥಿ ಮಧುಶ್ರೀ ಮಾತನಾಡಿ, ಉದ್ಯೋಗ ಕೌಶಲ ತರಬೇತಿಯಲ್ಲಿ ಹಲವು ವಿಷಯಗಳು ನಮಗೆ ತಿಳಿಸಲಾಯಿತು. ಪದವಿ ಪಡೆದು ಉದ್ಯೋಗ ಹುಡುಕುವ ತವಕದಲ್ಲಿರುವ ವಿದ್ಯಾರ್ಥಿಗಳಿಗೆ ಈ ಯೋಜನೆಯಿಂದ ಉಪಯೋಗವಾಗುತ್ತದೆ. ಇದರ ಬಗ್ಗೆ ವಾದ್ವಾನಿ ಪೌಂಡೇಶನ್ ತರಬೇತಿದಾರರು ಉತ್ತಮ ಮಾಹಿತಿಯನ್ನು ನೀಡಿದ್ದಾರೆ. ಇದರಿಂದ ನಮಗೂ ಹಾಗೂ ವಿದ್ಯಾರ್ಥಿಗಳಿಗೂ ಅನುಕೂಲ ಆಗುತ್ತದೆ. ಕಾಲೇಜು ಶಿಕ್ಷಣ ಇಲಾಖೆ ಇಂತಹ ಉಪಯುಕ್ತ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಆಯೋಜಿಸುವುದು ಅತ್ಯವಾಶ್ಯವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯೆ ತರುನ್ನುಂ ನಿಖತ್, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉದ್ಯೋಗ ಕೌಶಲ ತರಬೇತಿ ನೀಡಲು ನಮ್ಮ ಪದವಿ ಕಾಲೇಜಿನಲ್ಲಿ ಅವಕಾಶ ಕಲ್ಪಿಸಿದ ಇಲಾಖೆಗೆ ಧನ್ಯವಾದಗಳು. ಪ್ರಸ್ತುತ ಪದವಿ ಕಲಿತ, ಕಲಿಯುತ್ತಿರುವ ಮಕ್ಕಳಿಗೆ ಕೌಶಲದ ಬಗ್ಗೆ ಬೋಧಕರು ಅರಿವು ಮೂಡಿಸುವ ಕೆಲಸ ಮಾಡಬೇಕು. ಇದೊಂದು ಅವಶ್ಯಕವಾಗಿರುವ ಯೋಜನೆಯಾಗಿದ್ದು, ಹೆಚ್ಚಿನ ಪ್ರಚಾರ ಮಾಡುವ ಮೂಲಕ ನಿರುದ್ಯೋಗಸ್ಥ ಯುವಕರಿಗೆ ಆಸರೆಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಐಟಿ ನೋಡಲ್ ಅಥಿಕಾರಿ ಡಾ.ನಂದಿತಾ ಪ್ರಸಾದ್, ಕಾಲೇಜು ಶಿಕ್ಷಣ ಇಲಾಖೆಯ ಮಂಜುನಾಥ್, ವಾಧ್ವಾನಿ ಫೌಂಡೇಶನ್ ತರಬೇತುದಾರರಾದ ಸ್ವಾತಿ, ವಿನಯ, ಡಾ.ಆಯಿಷಾ, ಡಾ.ವಸಂತಕುಮಾರಿ, ಸಿ.ಸಿ.ಬಾರಕೇರ, ಡಾ.ಯೋಗೀಶ್, ಡಾ.ರೇಣುಕಾ ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296