ಬೆಂಗಳೂರು: ʻʻನಾನೇ ಸ್ಟ್ರಾಂಗ್ ನಾನೇ ಸ್ಟ್ರಾಂಗ್ ಎನ್ನುವ ಸಿದ್ದರಾಮಯ್ಯನವರೇ ನಿಮ್ಮ ಪರಿಸ್ಥಿತಿ ಹೇಗಿದೆ; 5 ವರ್ಷ ಸಿಎಂ ಆಗಿರುವ ಖಾತರಿಯೇ ನಿಮಗಿಲ್ಲʼʼ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ ಗೇಲಿ ಮಾಡಿದ್ದಾರೆ.
ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೇ 5 ವರ್ಷ ಸಿಎಂ, ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಎಂದು ಹೇಳಿಸಿಕೊಳ್ಳುವ ಸ್ಥಿತಿ ಅವರದು. ದುರ್ಬಲ ಆಡಳಿತ ಸಿದ್ದರಾಮಯ್ಯರದು. ಕಳೆದೊಂದು ವರ್ಷವನ್ನು ಗಮನಿಸಿದರೆ ಆಡಳಿತದ ಹಿಡಿತವೇ ಅವರಿಗೆ ಸಿಕ್ಕಿಲ್ಲ ಎಂದು ಅರಿವಾಗುತ್ತದೆ ಟೀಕಿಸಿದರು. ನೀವೇ ನೇಮಕ ಮಾಡಿಕೊಂಡ ರಾಜಕೀಯ ಕಾರ್ಯದರ್ಶಿ, ಮುಖ್ಯಮಂತ್ರಿಗಳ ಸಲಹೆಗಾರರು ‘ಅಭಿವೃದ್ಧಿಗೆ ಬಿಡಿಗಾಸೂ ಕೊಡುತ್ತಿಲ್ಲ’ ಎಂದು ನಿಮ್ಮ ಗುಣಗಾನ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಹಿರಿಯ ಸಚಿವರು ಮತ್ತು ಶಾಸಕರೇ ನಿಮ್ಮ ಸ್ಟ್ರಾಂಗ್ ಆಡಳಿತಕ್ಕೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ನಿಮ್ಮ ಸರಕಾರದ ನೀತಿಯ ಪರಿಣಾಮವಾಗಿ ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ. ಮಹಿಳಾ ದೌರ್ಜನ್ಯ ಮಾತ್ರವಲ್ಲ ಬೆತ್ತಲೆ ಮೆರವಣಿಗೆ ನಡೆಯುತ್ತಿದೆ. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಆಗುತ್ತದೆ. ಹನುಮಾನ್ ಚಾಲೀಸ ಹಾಕುವುದು ಕೂಡ ಗಲಭೆಗೆ ಕಾರಣವಾಗುವಷ್ಟು ಆಡಳಿತ ಹದಗೆಟ್ಟಿದೆ ಎಂದು ಸಿ.ಟಿ. ರವಿ ಟೀಕಿಸಿದರು.
ಮುಖ್ಯಮಂತ್ರಿಗಳ ಜೊತೆಗೆ ಶ್ಯಾಡೋ ಮುಖ್ಯಮಂತ್ರಿ, ಸೂಪರ್ ಸಿಎಂ- ಇವರೆಲ್ಲರೂ ಸಕ್ರಿಯರಾಗಿದ್ದಾರೆ. ಮುಖ್ಯಮಂತ್ರಿ ದುರ್ಬಲವಾಗಿದ್ದಾರೆ ಎಂದೇ ಇದರ ಅರ್ಥ ಎಂದು ಅವರು ವಿಶ್ಲೇಷಣೆ ಮಾಡಿದರು.
ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಬಿಜೆಪಿ ವಕ್ತಾರರಾದ ಪ್ರಕಾಶ್, ಮೋಹನ್ ವಿಶ್ವ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಮುಖ್ಯಮಂತ್ರಿಗಳು ತಮ್ಮ ಟ್ವೀಟ್ ನಲ್ಲಿ ‘ನಾನೇ ಸ್ಟ್ರಾಂಗ್ ಸಿಎಂ; ವೀಕ್ ಪಿಎಂ’ ಎಂದಿದ್ದಾರೆ. ಯಾರು ತನ್ನನ್ನು ತಾನು ಸ್ಟ್ರಾಂಗ್ ಎನ್ನುವವರು ವೀಕ್ ಆಗಿರುತ್ತಾರೆ. ನರೇಂದ್ರ ಮೋದಿ ಅವರು ಬಲಿಷ್ಠ ನಾಯಕ ಎಂದು ಕೇವಲ ನಮ್ಮ ಪಕ್ಷ, ನಮ್ಮ ನಾಯಕರು ಮತ್ತು ಕಾರ್ಯಕರ್ತರು ಹೇಳುತ್ತಿಲ್ಲ. ದೇಶದ ಜನತೆ ಮಾತ್ರವಲ್ಲದೆ ವಿಶ್ವದ ಅಗ್ರಗಣ್ಯ ನಾಯಕರು ಮೋದಿಯವರನ್ನು ಅತ್ಯಂತ ಬಲಿಷ್ಠ ನಾಯಕರು ಎನ್ನುತ್ತಾರೆ ಎಂದು ಸಿ.ಟಿ.ರವಿ ಅವರು ವಿಶ್ಲೇಷಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


