ಚಿಕ್ಕಮಗಳೂರು: ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಎಕ್ಸ್ ನಲ್ಲಿ ದ್ವೇಷದ ಪೋಸ್ಟ್ ಅನ್ನು ಹಂಚಿಕೊಂಡ ಮಾಜಿ ಸಚಿವ ಸಿಟಿ ರವಿ ವಿರುದ್ಧ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಸಿಟಿ ರವಿ ರಾಹುಲ್ ಗಾಂಧಿ ಹೇಳಿಕೆ ಉಲ್ಲೇಖಿಸಿ ಬರೆದುಕೊಂಡಿದ್ದ ಪೋಸ್ಟ್ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ, ಎಂದು ಆರೋಪಿಸಿ ಚುನಾವಣಾ ಆಯೋಗದ ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣ ಸಮಿತಿಯ ಸಹಾಯಕ ಚುನಾವಣಾಧಿಕಾರಿಯೊಬ್ಬರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇರೆಗೆ ಪೊಲೀಸರು ಸಿಟಿ ರವಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
“ಸಾಗರದ ಆಳವನ್ನಾದರೂ ಅಳೆಯಬಹುದು, ಆದರೆ ರಾಹುಲ್ ಗಾಂಧಿ ಮನಸಿನಲ್ಲಿ ಹಿಂದೂಗಳು ಮತ್ತು ಹಿಂದೂ ಧರ್ಮದ ಬಗ್ಗೆ ಇರುವ ದ್ವೇಷವನ್ನು ಅಳೆಯಲಾಗದು. ರಾಹುಲ್ ಗಾಂಧಿ ಅವರು, ಶಕ್ತಿ ವಿರುದ್ಧ ನಮ್ಮ ಹೋರಾಟ ಎಂದಿದ್ದಾರೆ. ಹಿಂದೂ ಧರ್ಮದಲ್ಲಿ ಶಕ್ತಿ ಎಂಬುದಕ್ಕೆ ವಿಶೇಷ ಅರ್ಥ, ಗೌರವ ಇದೆ, ಇದರ ವಿರುದ್ಧ ಹೋರಾಟ ಮಾಡುವವರು, ಹಿಂದೂ ದರ್ಮದ ವಿರೋಧಿಗಳು” ಎಂದು ಸಿಟಿ ರವಿ ಪೋಸ್ಟ್ ನಲ್ಲಿ ಬರೆದುಕೊಂಡಿದ್ದರು.
ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಕಾನೂನು ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು ಎಂದು ಚುನಾವಣಾ ಆಯೋಗ ಜಿಲ್ಲಾ ಚುನಾವಣಾಧಿಕಾರಿಗೆ ಸೂಚನೆ ನೀಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


