ಗೃಹಿಣಿಯೊಬ್ಬರು ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯದ ಕೆ.ಆರ್. ಪೇಟೆ ತಾಲೂಕು ಕಿಕ್ಕೇರಿ ಹೋಬಳಿ ಲಿಂಗಾಪುರ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ವರದಿಯಾಗಿದೆ.
ಲಿಂಗಾಪುರ ಗ್ರಾಮದ ಪ್ರೇಮಕುಮಾರಿ(26) ತನ್ನ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಆಕೆಯ ತಂದೆ ರಾಜೇಂದ್ರ ಪುತ್ರಿಯ ಗಂಡ ಮತ್ತು ಅವರ ಮನೆಯವರ ವಿರುದ್ಧ ಕಿಕ್ಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 2022 ಮಾರ್ಚ್ 6 ರಂದು 150 ಗ್ರಾಂ ಚಿನ್ನಾಭರಣ, 5 ಲಕ್ಷ ರೂ. ವರದಕ್ಷಿಣೆ ನೀಡಿ ರಾಘವೇಂದ್ರನಿಗೆ ಮಗಳನ್ನು ಮದುವೆ ಮಾಡಲಾಗಿತ್ತು. ಮದುವೆಯಾದ ಆರು ತಿಂಗಳ ನಂತರ, ಅಳಿಯ ಮತ್ತು ಮನೆಯವರು ನನ್ನ ಮಗಳಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು, ಪ್ರೇಮಕುಮಾರಿ ತಂದೆ ದೂರಿನಲ್ಲಿ ಆರೋಪಿಸಿದ್ದಾರೆ.
ಕಿರುಕುಳ ತಾಳಲಾರದೆ ಮಗಳು ನಮ್ಮ ಮನೆಗೆ ಬಂದಿದ್ದಳು. ನ್ಯಾಯ ಪಂಚಾಯಿತಿ ಮಾಡಿದರೂ ಪತಿ ಮನೆಯವರು ಕರೆದುಕೊಂಡು ಹೋಗಲಿಲ್ಲ. ನಮ್ಮ ಮನೆಯಲ್ಲೇ ಇದ್ದುಕೊಂಡು ಕಾನೂನು ಕಾಲೇಜಿಗೆ ಮಗಳು ಸೇರಿಕೊಂಡಿದ್ದಳು. ಅಲ್ಲಿಗೂ ಹೋಗಿ ಕೊಲೆ ಬೆದರಿಕೆ ಹಾಕುತ್ತಿದ್ದರು. ಹಾಗಾಗಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಾಜೇಂದ್ರ ದೂರಿದ್ದಾರೆ. ಈ ಸಂಬಂಧ ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


