ತುಮಕೂರು: ಅಕಾಲಿಕ ಮಳೆಯಿಂದಾಗಿ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದ್ದು, ಈ ಮೂಲಕ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಮಳೆಗೆ ನಾಶವಾದ ಬೆಳೆಗಳಲ್ಲಿ ಅಳಿದುಳಿದ ಬೆಳೆಗಳ ಕಟಾವಿನಲ್ಲಿ ರೈತರು ತೊಡಗಿದ್ದಾರೆ. ಆದರೆ, ವರ್ಷಪೂರ್ತಿ ಜಾನುವಾರುಗಳಿಗೆ ಸಾಕಾಗುವಷ್ಟು ಮೇವು ಮಾತ್ರ ರೈತರಿಗೆ ಸಿಗುತ್ತಿಲ್ಲ. ಇದರ ನಡುವೆ ಒಣ ಮೇವಿನ ಬೆಲೆಯಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ.
ಮೇವಿನ ಕೊರತೆಯಿಂದಾಗಿ ಹಳ್ಳಿಗಳಿಂದ ನಗರಕ್ಕೆ ಮೇವು ತಂದು ಮಾರಾಟ ಮಾಡಿ ಅದರಿಂದಲೇ ಬದುಕು ಸಾಗಿಸುತ್ತಿದ್ದವರ ಜೀವನ ಅತಂತ್ರವಾಗಿದೆ. ಹೀಗಾಗಿ ಕೇವಲ ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲದೇ ನಗರ ಪ್ರದೇಶಗಳಲ್ಲಿಯೂ ಜಾನುವಾರು ಸಾಕಣೆ ನಡೆಸುತ್ತಿರುವವರಿಗೆ ಇದೊಂದು ಸಮಸ್ಯೆಯಾಗಿ ಪರಿಣಮಿಸಲಿದೆ ಎಂದು ಹೇಳಲಾಗುತ್ತಿದೆ.
ಸದ್ಯ ಎಲ್ಲೆಡೆ ಎದುರಾದ ಅಕಾಲಿಕ ಮಳೆಗೆ ಅಲ್ಪ ಪ್ರಮಾಣದಲ್ಲಿರುವ ಜಾನುವಾರುಗಳಿಗೆ ಮೇವು ಒದಗಿಸಲು ಆಗದ ಪರಿಸ್ಥಿತಿಯಲ್ಲಿ ರೈತರು ಬದುಕು ಸಾಗಿಸುತ್ತಿದ್ದಾರೆ. ಇತ್ತ ಬೆಳೆದ ಫಸಲು ಕೈ ಸೇರಲಿಲ್ಲ. ಅತ್ತ ಜಾನುವಾರುಗಳಿಗೆ ಮೇವು ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪಶುಸಂಗೋಪನೆ ಮತ್ತು ಕೃಷಿ ಇಲಾಖೆ ರೈತರ ನೆರವಿಗೆ ನಿಲ್ಲುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಮೇವಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಮೇವು ಬ್ಯಾಂಕ್ ಪ್ರಾರಂಭ ಅಥವಾ ಹಸಿ ಮೇವು ಬೆಳೆಯಲು ಅನುವು ಮಾಡಿಕೊಡಬೇಕು ಎಂದು ಇಲ್ಲಿನ ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700