ವನ್ಯಜೀವಿ ಸಂರಕ್ಷಣೆ ವಿಷಯದಲ್ಲಿ ಜರ್ಮನಿ ಮತ್ತು ಬೋಟ್ಸ್ ವಾನ ದೇಶಗಳ ನಡುವಿನ ವಾಗ್ಯುದ್ದ ತಿಕ್ಕಾಟ ತೀವ್ರಗೊಂಡಿದ್ದು, ಜರ್ಮನಿಗೆ 20,000 ಆನೆಗಳ ಹಿಂಡನ್ನು ಕಳುಹಿಸುವುದಾಗಿ ಬೋಟ್ಸ್ ವಾನ ದೇಶದ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಬೋಟ್ಸ್ ವಾನ ಜಗತ್ತಿನಲ್ಲಿ ಅತ್ಯಧಿಕ ಆನೆಗಳ ಸಂತತಿ ಇರುವ ದೇಶವಾಗಿದೆ. ಆನೆದಂತ ಬೇಟೆ ಆಡುವವರನ್ನು ನಿಯಂತ್ರಿಸಬೇಕು ಎಂದು ಜರ್ಮನಿಯ ಪರಿಸರ ಸಚಿವೆ ಇತ್ತೀಚೆಗೆ ಆಗ್ರಹಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಬೋಟ್ಸ್ ವಾನ ಅಧ್ಯಕ್ಷ ಮೊಗ್ ವಿಯೆಟ್ಸಿ ಮಸೀಸಿ, ಹೀಗೆ ಮಾಡಿದರೆ ದೇಶದಲ್ಲಿ ಆನೆಗಳ ಸಂತತಿ ಇನ್ನಷ್ಟು ಹೆಚ್ಚಬಹುದು. ಈಗಾಗಲೇ ಆನೆಗಳನ್ನು ನಿಯಂತ್ರಿಸಲು ನಾವು ಹೆಣಗುತ್ತಿದ್ದೇವೆ. ನಮಗೆ ಪಾಠ ಮಾಡುವ ಬದಲು ಜರ್ಮನಿ ಆನೆಗಳೊಂದಿಗೆ ಬದುಕಿ ತೋರಿಸಲಿ. ಅದಕ್ಕೆ ನಾವು 20,000 ಆನೆಗಳನ್ನು ಜರ್ಮನಿಗೆ ಕಳಿಸುತ್ತೇವೆ ಎಂದರು. ಮನುಷ್ಯ-ಪ್ರಾಣಿ ಸಂಘರ್ಷದ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಬೋಟ್ಸ್ ವಾನದಲ್ಲಿ ಪ್ರತೀ ವರ್ಷ ನಿರ್ದಿಷ್ಟ ಪ್ರಮಾಣದಲ್ಲಿ ಆನೆಗಳ ಹತ್ಯೆಗೆ ಲೈಸೆನ್ಸ್ ನೀಡಲಾಗುತ್ತದೆ.
ಬೋಟ್ಸ್ ವಾನದಲ್ಲಿ ಆನೆಗಳ ಹತ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಜರ್ಮನಿಯ ಪರಿಸರ ಸಚಿವೆ ಸ್ಟೆಫಿ ಲೆಮ್ಕೆ, ಪ್ರಾಣಿಗಳ ಚರ್ಮ, ದಂತ, ಉಗುರು ಮತ್ತಿತರ ವಸ್ತುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದರ ಮೇಲೆ ನಿಷೇಧ ಹೇರುವುದಾಗಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮೊಗ್ ವಿಯೆಟ್ಸಿ ಮಸೀಸಿ `ಜರ್ಮನಿಯ ರಾಜಧಾನಿಯಲ್ಲಿ ಕುಳಿತು ನಮ್ಮ ವ್ಯವಹಾರಗಳ ಬಗ್ಗೆ ಹೇಳಿಕೆ ನೀಡುವುದು ಸುಲಭ. ಈ ವನ್ಯಜೀವಿಗಳನ್ನು ಸಂರಕ್ಷಿಸಿದ್ದಕ್ಕೆ ನಾವೀಗ ಬೆಲೆ ತೆರುತ್ತಿದ್ದೇವೆ. ಆನೆಗಳ ಹಿಂಡು ಬೆಳೆಗಳನ್ನು, ಆಸ್ತಿಗಳನ್ನು ನಾಶಗೊಳಿಸುತ್ತಿದೆ. ಈಗ ಸುಮಾರು 20,000 ಆನೆಗಳನ್ನು ಜರ್ಮನಿಗೆ ಕಳಿಸುತ್ತೇವೆ. ಆನೆಗಳನ್ನು ಹೇಗೆ ಸಂರಕ್ಷಿಸಬೇಕು ಎಂದು ಅವರು ಪ್ರಾಯೋಗಿಕವಾಗಿ ತೋರಿಸಲಿ’ ಎಂದು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


