ಬೆಣ್ಣೆ ನಗರಿ, ಶಿಕ್ಷಣ ನಗರಿ ಎಂದೆಲ್ಲ ಪ್ರಖ್ಯಾತಿ ಹೊಂದಿರುವ ದಾವಣಗೆರೆ ನಗರದಲ್ಲಿ ಶ್ರೀಮಂತರು, ಮಧ್ಯಮ ವರ್ಗದವರು, ಬಡವರು ಮತ್ತು ಕಡುಬಡವರಂತಹ ಲಕ್ಷಾಂತರ ಜನರು ವಾಸ ಮಾಡುತ್ತಿದ್ದಾರೆ. ಇಂತಹ ದಾವಣಗೆರೆಯ ಶಾಮನೂರು ಕೆಳ ಸೇತುವೆಯನ್ನೇ ಸೂರು ಮಾಡಿಕೊಂಡು ಪುಟ್ಟ ನಾಯಿಮರಿಯೊಂದಿಗೆ ವಾಸವಿದ್ದ ವಯೋವೃದ್ಧೆಯನ್ನು ರಕ್ಷಿಸಿ ಸೂಕ್ತ ವೈದ್ಯಕೀಯ ಚಿಕಿತ್ಸೆಯೊಂದಿಗೆ ಮಹಿಳಾ ರಕ್ಷಣಾಲಯಕ್ಕೆ ಕಳುಹಿಸಿ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಮಾನವೀಯತೆ ಮೆರೆದಿದ್ದಾರೆ.
ನ್ಯಾಯಾಧೀಶರು ಪ್ರತಿದಿನ ವಸತಿಗೆ ಹಿಂದಿನ ನ್ಯಾಯಾಲಯಕ್ಕೆ ಸಂಚರಿಸುವ ದಾರಿಯಲ್ಲಿ ಮಳೆ, ಗಾಳಿ ಮತ್ತು ಧೂಳಿನ ನಡುವೆ ವಾಸವಿದ್ದ ಈ ವಯೋವೃದ್ಧೆಯನ್ನು ಗಮನಿಸಿದ್ದಾರೆ. ತಮ್ಮ ಇಲಾಖೆಯ ಇನ್ನೋರ್ವ ನ್ಯಾಯಾಧೀಶರಾದ ಮಹಾವೀರ ಕರೆಣ್ಣನವರ ಇವರೊಂದಿಗೆ ಸೇರಿ ವೃದ್ಧೆಯ ಬದುಕಿಗೆ ಆಸರೆ ಆಗಿದ್ದಾರೆ. ಮೊದಮೊದಲು ತೀವ್ರ ಪ್ರತಿರೋಧ, ಆಕ್ರೋಶ, ಕೌಟುಂಬಿಕವಾಗಿ ತನ್ನ ಮೇಲಾದ ಆಕ್ರಮಣಗಳನ್ನು ಅಸ್ಪಷ್ಟವಾಗಿ ಹೇಳುತ್ತಿದ್ದ ಆ ವಯೋವೃದ್ಧೆ, ಉಂಡ ಸಂಕಟಗಳ ಕಾರಣಕ್ಕೋ ಏನೋ ತನ್ನೆದುರಿಗೆ ನಿಂತು ತನ್ನನ್ನು ವಿಚಾರಿಸುತ್ತಿದ್ದ ನ್ಯಾಯಾಧೀಶರ ಮೇಲೆಯೇ ಹರಿಹಾಯ್ದಿದ್ದರು ಎನ್ನಲಾಗಿದೆ.
ಆದರೂ ಸಹ, ಸಹನೆ ಕಳೆದುಕೊಳ್ಳದೆ ಸಮಾಧಾನದಿಂದ ಆ ಅಜ್ಜಿಯ ಮಾನಸಿಕ ಸ್ಥಿತಿಗತಿ ಅರಿತು, ನ್ಯಾಯಾಧೀಶರಾದ ಮಹಾವೀರ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಕೊನೆಗೂ ಅವಳ ಮನ ಒಪ್ಪಿಸಿ ಮಹಿಳಾ ರಕ್ಷಣಾಲಯಕ್ಕೆ ಕಳುಹಿಸುವಲ್ಲಿ ಯಶಸ್ವಿಯಾದರು ಎಂದು ವರದಿ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


