ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಾವು ರಂಗೇರಿದೆ. ದಿನದಿಂದ ದಿನಕ್ಕೆ ಪ್ರಚಾರದ ಅಬ್ಬರ ಜೋರಾಗುತ್ತಿದೆ. ಬಿಜೆಪಿ-ಜೆಡಿಎಸ್ ಕಾಂಗ್ರೆಸ್ ಪಕ್ಷಗಳು ಗೆಲುವಿಗಾಗಿ ತಂತ್ರದ ಮೇಲೆ ತಂತ್ರ ಹೆಣೆಯುತ್ತಿವೆ. ಈ ನಡುವೆ ಭಾರೀ ಅಚ್ಚರಿ ಹಾಗೂ ವಿಚಿತ್ರ ಘಟನೆಯೊಂದು ನಡೆದಿದ್ದು, ಬಿಜೆಪಿ ನಾಯಕರೊಬ್ಬರು RSS ಗಣವೇಶದಲ್ಲಿಯೇ ಬಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಗದಗ ಜಿಲ್ಲೆಯ ನರಗುಂದದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಆರ್ ಎಸ್ ಎಸ್ ಸ್ವಯಂ ಸೇವಕ ಹಾಗೂ ಬಿಜೆಪಿ ನಾಯಕರಾದ ರೋಣ ತಾಲೂಕಿನ ಮೆಣಸಗಿ ಗ್ರಾಮದ ನಿಂಗಬಸಪ್ಪ ಬಾಣದ್ ಎನ್ನುವವರು, ತಮ್ಮ ಮಾತೃ ಸಂಸ್ಥೆ RSS ನ ಗಣವೇಶದಲ್ಲಿಯೇ ಬಂದು ಕಾಂಗ್ರೆಸ್ ಸೇರ್ಪಡೆಯಾದರು. ಮೂವತ್ತು ವರ್ಷದಿಂದ ಆರ್ ಎಸ್ ಎಸ್ ಸಕ್ರಿಯ ಕಾರ್ಯಕರ್ತರಾಗಿರುವ ಬಾಣದ್ ಅವರು ಗಣವೇಷದಲ್ಲೇ ಕಾಂಗ್ರೆಸ್ ಶಾಲು ಹಾಕಿಸಿಕೊಂಡಿರುವುದು ವಿಶೇಷ ಎನ್ನಲಾಗಿದೆ.
ಅಂದಹಾಗೆ, ಮಾಜಿ ಶಾಸಕ ಎಸ್ ಜಿ ನಂಜಯ್ಯನಮಠ ಸಮ್ಮುಖದದಲ್ಲಿ ನಿಂಗಬಸಪ್ಪ ಬಾಣದ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ಇನ್ನು ಸಚಿವ ಶಿವಾನಂದ ಪಾಟೀಲ, ಮಾಜಿ ಸಚಿವ ಬಿಆರ್ ಯಾವಗಲ್ ಅವರು ನಿಂಗಬಸಪ್ಪ ಬಾಣದ್ ಅವರ ತಲೆ ಮೇಲಿನ ಕಪ್ಪು ಟೋಪಿ ತೆಗೆದು ಖಾದಿ ಗಾಂಧಿ ಟೋಪಿ ಹಾಕಿ ಕಾಂಗ್ರೆಸ್ ಶಾಲು ಹಾಕುವ ಮೂಲಕ, ಪಕ್ಷಕ್ಕೆ ಸ್ವಾಗತ ಮಾಡಿಕೊಂಡರು. RSS ಕಾರ್ಯಕರ್ತನೊಬ್ಬನ ಈ ವಿಚಿತ್ರ ಬೆಳವಣಿಗೆ ರಾಜ್ಯದಲ್ಲಿ ಭಾರೀ ಅಚ್ಚರಿ ಮೂಡಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


