ಮಧುಗಿರಿ: ಮಧುಗಿರಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, “ಮಧುಗಿರಿಗೂ ದೇವೇಗೌಡರ ಕುಟುಂಬಕ್ಕೂ ಯಾವುದೊ ಒಂದು ಜನ್ಮದ ಋಣಾನುಬಂದ ಇದೆ” ಎಂದು ಹೇಳಿದರು. “ದೇಶದ ಹಲವಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡುವ ಸಾಮರ್ಥ್ಯ ಉಳ್ಳವರು ಮೋದಿಯವರು ಅಂತಾ ಎಲ್ಲರೂ ನಂಬಿದ್ದಾರೆ.
ತುಮಕೂರಿನಲ್ಲಿ 6ನೆ ವಿಧಾನಸಭಾ ಕ್ಷೇತ್ರ ಮಧುಗಿರಿಗೆ ನಾನು ಬಂದಿದ್ದೇನೆ. ಕಳೆದ ಬಾರಿ ದೇವೇಗೌಡರು ಇಲ್ಲಿ ಚುನಾವಣೆ ನಿಂತಾಗ ಏನೇನಾಯ್ತು ಅನ್ನೋದನ್ನ ನಾನು ಚರ್ಚೆ ಮಾಡೋಕೆ ಹೋಗೋದಿಲ್ಲ. ಮಧುಗಿರಿಯಲ್ಲಿ ನೀರಿನ ಸಮಸ್ಯೆ ಇದೆ. 2004ರಿಂದ ಜೆಡಿಎಸ್ ಸ್ವತಂತ್ರವಾಗಿ ಆಡಳಿತಕ್ಕೆ ತರಬೇಕು ಅಂತಾ ಪ್ರಯತ್ನ ಪಟ್ಟಿದ್ದೇವೆ.
ಆದರೆ ದುರದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ. 2006ರಲ್ಲಿ ಬಿಜೆಪಿ- ಜೆಡಿಎಸ್ ಸೇರಿ ಸರ್ಕಾರ ಮಾಡಿತು. ಇಡೀ ದೇಶದಲ್ಲಿ ಜನಪರವಾದ ಸರ್ಕಾರ ಅಂದ್ರೆ ಅದು ಕುಮಾರಸ್ವಾಮಿ ನೇತೃತ್ವದ ಸರ್ಕಾರ ಎಂಬ ಭಾವನೆ ಇತ್ತು. ನಾನು ಆ ಸಂದರ್ಭದಲ್ಲಿ ಹೇಗೆ ಕೆಲಸ ಮಾಡಿದ್ದೇನೆ ಅನ್ನೋದನ್ನ ನೀವು ನೋಡಿದ್ದೀರಿ.
ಬಿಜೆಪಿಯ ಜೊತೆ ಮಾಡಿದ ಸರ್ಕಾರದಲ್ಲಿ ಹಲವರು ಕಾರ್ಯಕ್ರಮಗಳನ್ನ ಕೊಟ್ಟಿದ್ದೇವೆ. ವಿಧವೆಯರಿಗೆ 400 ರೂಪಾಯಿ, ಗ್ರಾಮೀಣ ಭಾಗದ ಮಕ್ಕಳಿಗೆ ಸೈಕಲ್ ಕೊಟ್ಟದ್ದು, ಗ್ರಾಮವಾಸ್ತವ್ಯಕ್ಕೆ ಬಂದಾಗ ಹಲವು ತಾಯಂದಿರು ನನ್ನ ಗಮನಕ್ಕೆ ತಂದ್ರಿ. ಆಗ ನಾನು ಸಾರಾಯಿ ನಿಷೇಧ ಮಾಡಿದೆ. ಲಾಟರಿ ನಿಷೇಧ ಮಾಡಿದ್ದೇನೆ. ಅಂತಹ ನಾನು ತಾಯಂದಿರಿಗೆ ಅವಮಾನ ಮಾಡ್ತೀನಾ?
ರಾಜ್ಯದಲ್ಲಿ ಕೆಟ್ಟ ಸರ್ಕಾರ ನಡೀತಾ ಇದೆ. ಐದು ಗ್ಯಾರೆಂಟಿ ಅಂತಾ ಹೇಳ್ತಾರಲ್ಲ.. ನಿಮ್ಮೆಲ್ಲ ತಾಯಂದಿರಿಗೆ ನಾನು ಕೈ ಜೋಡಿಸಿ ಮನವಿ ಮಾಡ್ತೀನಿ.. ನಿಮಗೆ ಕೊಡ್ತಿರೋ 2000 ಇದ್ಯಲ್ಲಾ, ಅದಕ್ಕಾಗಿ ನಿಮ್ಮ ಕುಟುಂಬದವರು ಮುಂದೆ ಯಾವ ಹೊರೆ ತಂದಿಡುತ್ತೆ ಅನ್ನೋದನ್ನ ಅರ್ಥ ಮಾಡಿಕೊಳ್ಳಿ.
ಈ ಸರ್ಕಾರ ನಮ್ಮ ರಾಜ್ಯವನ್ನ ಸಾಲದ ಹೊರೆಗೆ ಒಯ್ದು ನಿಲ್ಲಿಸುತ್ತೆ. ಒಂದು ಕುಟುಂಬದ ಮೇಲೆ 36000 ರೂಪಾಯಿ ಸಾಲ ಮಾಡಿ ನಿಲ್ಲಿಸಿದ್ದಾರೆ. ನೂರಕ್ಕೆ 80-90 ಭಾಗ ಜನ ನಾವೆಲ್ಲಾ ಕುಡಿಯೋದು ಕಲಿತು ಬಿಟ್ಟಿದ್ದೀವಿ. ಆಗ ಸಂಜೆ ಸ್ನೇಹಿತರ ಜೊತೆ ಹೊರಗಡೆ ಹೋದ್ರೆ 25-50 ರೂಪಾಯಿಯಲ್ಲಿ ಮುಗಿದು ಹೋಗ್ತಿತ್ತು. ಈಗ ಒಂದು ಕ್ವಾರ್ಟರ್ ಗೆ 250 ರೂಪಾಯಿ ಆಗೋಗಿದೆ.
ಇದು ಒಂದು ರೀತಿಯ ಪಿಕ್ ಪಾಕೆಟ್ ಸರ್ಕಾರ. ಸಂವಿಧಾನವನ್ನೇ ರದ್ದು ಮಾಡ್ತಾರೆ ಅಂತಾ ನಂಬಿಸುತ್ತಿದ್ದಾರೆ. ಅದನ್ನ ಯಾವುದೇ ದಲಿತ ಯುವಕರು ನಂಬೋದಕ್ಕೆ ಹೋಗ್ಬೇಡಿ. ಅಂಬೇಡ್ಕರ್ ಅವರು ನಿಧನರಾದಾಗ ಅವರ ಸಮಾಧಿ ಮಾಡೋಕೆ ಕಾಂಗ್ರೆಸ್ ನವರು ಜಾಗ ಕೊಡಲಿಲ್ಲ. ಈ ಚುನಾವಣೆಯಲ್ಲಿ ಗೆದ್ದರೆ ಮಲ್ಲಿಕಾರ್ಜುನ್ ಖರ್ಗೆ ಏನೋ ಆಗಿಬಿಡ್ತಾರೆ ಅಂತಾ ನಂಬಿಸ್ತಿದ್ದಾರೆ. ಏನೂ ಆಗಲ್ಲ.
ಈ ಚುನಾವಣೆ ಆದ್ಮೇಲೆ ಮಲ್ಲಿಕಾರ್ಜುನ ಖರ್ಗೆ ಖಾಲಿ ಕೈಯಲ್ಲಿ ಕರ್ನಾಟಕಕ್ಕೆ ಬರ್ಬೇಕು. ಅವರು ಪಕ್ಷಕ್ಕೆ ಇಷ್ಟೆಲ್ಲಾ ದುಡಿದಿದ್ದಕ್ಕೆ ಇನ್ನೂ ಅವರು ತ್ಯಾಗ ಮಾಡ್ಕೊಂಡೆ ಹೋಗ್ಬೇಕು.
ಸಿದ್ದರಾಮಯ್ಯ ಈಗ ಭಾಷಣ ಮಾಡ್ತಾರೆ. ಆದ್ರೆ 2013ರಲ್ಲಿ ಕೊರಟಗೆರೆಯಲ್ಲಿ ಪರಮೇಶ್ವರ್ ಗೆದ್ರೆ ತನಗೆ ಕಷ್ಟ ಆಗುತ್ತೆ ಅಂತಾ, ಅವರನ್ನ ಸೋಲಿಸೋಕೆ ಏನೇನು ತಯಾರಿ ಮಾಡಿಕೊಂಡ್ರು. ಇದು ದಲಿತ ಸಮುದಾಯಕ್ಕೆ ಮಾಡಿರೋ ಅನ್ಯಾಯ ಅಲ್ಲವಾ? ಇಲ್ಲಿನ ಡಿಸಿಸಿ ಬ್ಯಾಂಕ್ ನ್ನು ಇವರ ಅಪ್ಪನ ಮನೆ ಆಸ್ತಿ ಮಾಡಿಕೊಂಡುಬಿಟ್ಟಿದ್ದಾರೆ. ಅವರಿಗೆ ಯಾರಿಗೆ ಬೇಕು ಅವರಿಗೆ ಸಾಲ ಕೊಡೋದು, ಬೇಡ ಅಂದೋರಿಗೆ ಇಲ್ಲ. ಹಾಗೆ ಮಾಡಿಕೊಂಡು ಓಟು ಹಾಕಿಸಿಕೊಳ್ತಿದ್ದಾರೆ. ಇಷ್ಟು ದಿನ ಅಪ್ಪನ ದೌರ್ಜನ್ಯ ಆಯ್ತು, ಈಗ ಮಗ ಶುರು ಮಾಡಿಕೊಂಡಿದ್ದಾನೆ ಅಂತಾ ಕೇಳಿದ್ದೇನೆ. ಒಬ್ಬ ಜವಾನನನ್ನ ಕೂಡ ನಾನು ಅಣ್ಣ ಅಂತಾ ಕರೆದು ಆಡಳಿತ ನಡೆಸಿದ್ದೇನೆ.
ಅಧಿಕಾರಿಗಳಿಗೆ, ಪೊಲೀಸರಿಗೆ ಒಂದು ಮನವಿ ಮಾಡ್ತೀನಿ, ಇಲ್ಲಿನ ರೌಡಿ ಶಾಸಕನ ಪರವಾಗಿ ಕಾನೂನು ಮೀರಿ ಅವರಿಗೇ ಕೆಲಸ ಮಾಡಬೇಡಿ. ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸ್ತೀವಿ. ಇಲ್ಲೇನು ರೌಡಿಸಂ, ಗುಂಡಾಗಿರಿ ನಡೆಸ್ತಾ ಇದ್ದಾರೆ. ಕಾಲಚಕ್ರ ಉರುಳುತ್ತಾ ಇರುತ್ತೆ. ಈ ರೌಡಿಸಂಗೆ ಬೆಂಬಲ ಕೊಡವವರು ಪ್ರಾಯಶ್ಚಿತ ಪಡೋ ದಿನ ದೂರ ಇಲ್ಲ.
ಜಾತಿ ಹೆಸರು ಹೇಳಿಕೊಂಡು ಬರುವವರನ್ನೂ ನಂಬಬೇಡಿ. ದೇವೇಗೌಡರನ್ನ ಗೆಲ್ಲಿಸಿದ್ರೆ ಭದ್ರಾ ಮೇಲ್ದಂಡೆ ಯೋಜನೆಯಲ್ಲಿಯೂ ನೀರು ಬರ್ತಿತ್ತು. ಆದ್ರೆ ಅವರನ್ನ ಸೋಲಿಸಿದ್ರಿಂದ ಅವರು ಆರೋಗ್ಯ ಹಾಳಾಗುವಂತೆ ಆಯ್ತು” ಎಂದು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


