ಪೆನ್ ಡ್ರೈವ್ ವಿಚಾರ ಎಲ್ಲರಿಗಿಂತ ಮುಂಚಿತವಾಗಿ ಗೊತ್ತಿದ್ದದ್ದೇ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ಈ ಪ್ರಕರಣದಿಂದ ನುಣುಚಿಕೊಳ್ಳಲು ಕಾಂಗ್ರೆಸ್ ಹಾಗೂ ಡಿ.ಕೆ. ಶಿವಕುಮಾರ್ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ದೂರಿದ್ದಾರೆ. ಇದೇ ವೇಳೆ ಇದು ಹಾಸನ ಜಿಲ್ಲೆಯಲ್ಲೇ ಬಿಡುಗಡೆಯಾಗಿದ್ದು, ಇದರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಕೈವಾಡವೇ ಇರಬಹುದು ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಬಹಿರಂಗಗೊಳಿಸಿರುವುದು ಮಹಾನ್ ನಾಯಕ ಡಿ.ಕೆ. ಶಿವಕುಮಾರ್ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದರು.
ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಡಿ.ಕೆ. ಶಿವಕುಮಾರ್ ಅವರನ್ನು ಸ್ಮರಿಸದಿದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ನಿದ್ದೆ ಬರುವುದಿಲ್ಲ. ನಾವು ಪೆನ್ ಡ್ರೈವ್ ಬಿಡುಗಡೆ ಮಾಡುವುದಾಗಿದ್ದರೆ ಚುನಾವಣೆಗೆ ವಾರ ಅಥವಾ ಹತ್ತು ದಿನ ಮುಂಚಿತವಾಗಿಯೇ ಬಿಡುಗಡೆ ಮಾಡಬಹುದಾಗಿತ್ತಲ್ಲವೇ. ಈ ವಿಚಾರದಲ್ಲಿ ಎಲ್ಲರಿಗಿಂತ ಮುಂಚಿತವಾಗಿ ಗೊತ್ತಿದ್ದು ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರಿಗೆ. ಕಾಂಗ್ರೆಸ್ ಮೇಲೆ ಆರೋಪ ಮಾಡಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಇಲ್ಲಿ ಕುಮಾರಸ್ವಾಮಿ ಅವರ ಆರೋಪ ಮುಖ್ಯವೋ, ಆ ಭಾಗದ ಐನೂರಕ್ಕಿಂತ ಹೆಚ್ಚು ಸಂತ್ರಸ್ತೆಯರ ರಕ್ಷಣೆ ನ್ಯಾಯ ಒದಗಿಸುವುದು ಮುಖ್ಯವೋ? ಅವರು ತಮ್ಮ ಹುಳುಕು ಮುಚ್ಚಿಕೊಳ್ಳಲು ದಿನಾ ಒಂದೊಂದು ಹೇಳಿಕೆ ನೀಡುತ್ತಲೇ ಇರುತ್ತಾರೆ. ಅನ್ಯಾಯಕ್ಕೆ ಒಳಗಾಗಿರುವ ಬಗ್ಗೆ ನಾವು ಚಿಂತನೆ ಮಾಡಬೇಕು. ಕುಮಾರಸ್ವಾಮಿ ಅವರು ಯಾವ ವಿಚಾರದಲ್ಲಿ ಶಿವಕುಮಾರ್ ಅವರ ವಿರುದ್ಧ ಟೀಕೆ ಮಾಡದೇ ಇದ್ದಾರೆ? ಎಲ್ಲಿ ಏನೇ ಆದರೂ ಅದಕ್ಕೆ ಡಿ.ಕೆ. ಶಿವಕುಮಾರ್ ಕಾರಣ ಎನ್ನುತ್ತಾರೆ. ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಆರೋಪ ಮಾಡದೇ ಇರಲು ಅವರಿಗೆ ಆಗುವುದಿಲ್ಲ” ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


