ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಸುರಿದು ಹಲವು ಅವಾಂತರಗಳು ಸೃಷ್ಟಿಯಾಗ್ತಿದೆ. ಒಂದೆಡೆ ಮಳೆಗೆ ಮರಗಳು ಬಿದ್ದು ಸಮಸ್ಯೆಯಾದ್ರೆ ಮತ್ತೊಂದೆಡೆ ಅಂಡರ್ ಪಾಸ್, ರಸ್ತೆ ಒಂದಷ್ಟು ಕಡೆ ಮಳೆನೀರು ನುಗ್ಗಿ ಜನರು ಸಂಕಷ್ಟ ಅನುಭವಿಸಿದ್ದಾರೆ. ಬೆಂಗಳೂರಿನ ಕೆಲ ಏರಿಯಾಗಳಲ್ಲಿ ಹೆಚ್ಚು ಮಳೆಯಾಗಿದ್ದು, ಇದುವರೆಗೆ ಸುಮಾರು 150 ಕಡೆ ನೀರು ನಿಂತು ಸಮಸ್ಯೆಯಾಗಿದೆ. ಬೆಂಗಳೂರಲ್ಲಿ ಮತ್ತೆ ವರುಣ ದೇವ ಅಬ್ಬರಿಸಿದ್ದಾನೆ. ಸಂಜೆವರೆಗೆ ಸಾಮಾನ್ಯವಾಗಿದ್ದ ಬೆಂಗಳೂರಿನ ವಾತಾವರಣ ರಾತ್ರಿ ಸಂಪೂರ್ಣ ಬದಲಾಗಿದೆ. ನಗರದ ಬಹುತೇಕ ಭಾಗದಲ್ಲಿ ಮಳೆ ಅಬ್ಬರಿಸಿದೆ. ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದ್ದು, ಟ್ರಾಫಿಕ್ ಜಾಮ್ ಉಂಟಾಗಿ, ಬೈಕ್ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ನೃಪತುಂಗ ರಸ್ತೆಯಲ್ಲಿ ಸುಮಾರು ರಾತ್ರಿ 11:45ಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮುಂದೆ ಬೃಹತ್ ಮರದ ಕೊಂಬೆ ಧರೆಗುರುಳಿದೆ. ಪರಿಣಾಮ ಕೆಆರ್ ವೃತ್ತದಿಂದ ಸುಮಾರು 5 ಕಿಲೋ ಮೀಟರ್ ವರೆಗೂ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರ ಪರದಾಡಿದ್ದಾರೆ. ಇನ್ನೂ ಟ್ರಾಫಿಕ್ನಲ್ಲಿ ಸಿಲುಕಿದ ಆಂಬ್ಯುಲೆನ್ಸ್ ಸುಮಾರು 30 ನಿಮಿಷಗಳ ಕಾಲ ನಿಂತಲ್ಲಿ ನಿಂತಿತ್ತು. ಆಂಬ್ಯುಲೆನ್ಸ್ ನಲ್ಲಿದ್ದ ರೋಗಿ ಕೂಡ ಪರದಾಡಿದ್ರು. ಎಷ್ಟೊತ್ತು ಕಾದ್ರೂ ಬಿಬಿಎಂಪಿ ಸಿಬ್ಬಂದಿ ಮರ ತೆರವಿಗಾಗಿ ಬಾರದ ಕಾರಣ, ಪೊಲೀಸ್ ಪೇದೆಗಳ ಮುಂದೆ ಬಂದು, ಸಾರ್ವಜನಿಕರ ಸಹಾಯ ಕೇಳಿ ಬೃಹತ್ ಕೊಂಬೆ ತೆರವು ಗೊಳಿಸಿದ್ದಾರೆ.
ಮಂಡ್ಯ: ಬಿರುಗಾಳಿ ಸಹಿತ ಬಂದ ಭಾರೀ ಮಳೆಗೆ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ವಿಶ್ವಮಾನವ ಟ್ರೈನ್ ಮೇಲೆ ಮರ ಬಿದ್ದಿದೆ. ಇನ್ನೂ ಮರ ಬಿದ್ದ ಪರಿಣಾಮ ರೈಲಿನ ಮುಂಭಾಗದ ಗ್ಲಾಸ್ ಪುಡಿ ಪುಡಿಯಾಗಿದ್ದು, ರೈಲು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಮಂಡ್ಯದ ಉಮ್ಮಡಹಳ್ಳಿ ಗೇಟ್ ಬಳಿ ಘಟನೆ ನಡೆದಿದ್ದು, ಚಾಲಕನಿಗೆ ಗಾಯಗಳಾಗಿದ್ದರೂ ಟ್ರೈನ್ ಅನ್ನ ಮಂಡ್ಯ ರೈಲ್ವೆ ನಿಲ್ದಾಣದವರೆಗೂ ತಂದಿದ್ದಾನೆ. ಗಾಯಾಳು ಚಾಲಕನಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


