ಬೆಂಗಳೂರು: ಸಾಲ ತೀರಿಸಲು ಮನೆ ಮಾಲಕಿಯನ್ನೇ ಹತ್ಯೆ ಮಾಡಿದ್ದ ಯುವತಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಮೋನಿಕಾ (24) ಬಂಧಿತ ಆರೋಪಿಯಾಗಿದ್ದಾರೆ.
ಘಟನೆಯ ಹಿನ್ನಲೆ: ಮೇ 10 ರಂದು ಕೆಂಗೇರಿ ಠಾಣಾ ವ್ಯಾಪ್ತಿಯ ಕೋನಸಂದ್ರದಲ್ಲಿ ಒಂಟಿ ಮಹಿಳೆಯ ಕೊಲೆ ನಡೆದಿತ್ತು. ಕಂಪನಿಯೊಂದರಲ್ಲಿ ಕಳೆದ ಒಂದು ವರ್ಷದಿಂದ ಡೇಟಾ ಎಂಟ್ರಿ ಕೆಲಸ ಮಾಡಿದ್ದ ಮೋನಿಕಾ ಮೂಲತಃ ಕೋಲಾರ ಜಿಲ್ಲೆಯವಳಾಗಿದ್ದು, ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಗುರುಮೂರ್ತಿ ಎಂಬುವರ ಮನೆಯಲ್ಲಿ ಮೂರು ತಿಂಗಳ ಹಿಂದಷ್ಟೇ ಬಾಡಿಗೆಗೆ ಬಂದಿದ್ದಳು. ಈ ವೇಳೆ ಆಕೆ ಪ್ರಿಯಕರನನ್ನೇ ತನ್ನ ಗಂಡ ಎಂದು ಹೇಳಿ ಬಾಡಿಗೆ ಮನೆ ಗಿಟ್ಟಿಸಿದ್ದಳು. ಆದರೆ ಒಬ್ಬಂಟಿಯಾಗಿ ವಾಸವಿದ್ದ ಮೋನಿಕಾ ಮನೆಗೆ ಪ್ರಿಯಕರ ಆಗಾಗ ಬಂದು ಹೋಗುತ್ತಿದ್ದ.
ಇತ್ತ ಮೋನಿಕಾ ಶೋಕಿಗಾಗಿ ವಿಪರೀತ ಕೈಸಾಲ ಮಾಡಿಕೊಂಡಿದ್ದಳು. ಜೊತೆ ಪ್ರಿಯಕರನಿಗೆ ಟಾಟಾ ಏಸ್ ವಾಹನ ಖರೀದಿಸಲು ಹಣ ಬೇಕಾಗಿತ್ತು. ಹೀಗಾಗಿ ಮನೆ ಮಾಲಕಿ ದಿವ್ಯಾ ಮೈಮೇಲಿದ್ದ ಚಿನ್ನದ ಒಡವೆ ಮೇಲೆ ಮೋನಿಕಾ ಕಣ್ಣು ಬಿದ್ದಿತ್ತು. ದಿವ್ಯ ಪತಿ ಗುರುಮೂರ್ತಿ ಕೆಂಗೇರಿ ಉಪನಗರದ ಶಿವನಪಾಳ್ಯದಲ್ಲಿ ಸಲೂನ್ ಶಾಪ್ ನಡೆಸುತ್ತಿದ್ದರು. ದಿವ್ಯಾ ಅತ್ತೆ ಮಾವ ಸಹ ಬೆಳಗಾದ್ರೆ ಕೆಲಸಕ್ಕೆ ಹೋಗುತ್ತಿದ್ದರು.
ದಿವ್ಯಾ ಹಾಗೂ ಆಕೆಯ ೨ ವರ್ಷದ ಮಗು ಮಾತ್ರ ಮನೆಯಲ್ಲಿರುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದು ಕುತ್ತಿಗೆ ಹಿಸುಕಿ ಮೋನಿಕಾ ಕೊಲೆ ಮಾಡಿದ್ದಳು. ಕೊಲೆ ಮಾಡಿ ಕುತ್ತಿಗೆಯಲ್ಲಿದ್ದ 36 ಗ್ರಾಂ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದರು.
ಕುತ್ತಿಗೆ ಮೇಲೆ ಗಾಯದ ಗುರುತು ಇರುವುದು ಹಾಗೂ ಚಿನ್ನದ ಸರ ಇಲ್ಲದಿರುವುದನ್ನ ಕಂಡು ಪತ್ನಿಯನ್ನ ಹತ್ಯೆ ಮಾಡಿದ್ದಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಡಿಗೆಗಿದ್ದ ಯುವತಿಯನ್ನ ಬಂಧಿಸಿದ್ದಾರೆ.
ಕದ್ದ ಚಿನ್ನಸರವನ್ನ ಅಂಗಡಿಯೊಂದರಲ್ಲಿ ಗಿರವಿ ಇಟ್ಟಿದ್ದಳು. ಇನ್ನು ಅದೇ ಮನೆಯಲ್ಲೇ ಉಳಿದುಕೊಂಡು ಏನು ಮಾಡಿಲ್ಲವೆಂಬಂತೆ ನಟಿಸಿದ್ದಳು. ತನಿಖೆ ಕೈಗೊಂಡ ಇನ್ ಸ್ಪೆಕ್ಟರ್ ಕೊಟ್ರೇಶಿ ನೇತೃತ್ವದ ತಂಡವು ಅನುಮಾನದ ಮೇರೆಗೆ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಸಂಗತಿ ಬಾಯ್ಬಿಟ್ಟಿದ್ದಾಳೆ. ಸದ್ಯ ಆಕೆಯನ್ನ ಪೊಲೀಸ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR


