ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಹು ದಿನದ ಬೇಡಿಕೆಯಾಗಿದ್ದ ಗ್ರಾಮೀಣ ಪತ್ರಕರ್ತರರಿಗೆ ಬಸ್ ಪಾಸ್ ನೀಡುವ ಸಂಬಂಧ, ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ 38ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತು ಕೊಟ್ಟಂತೆ, ಈ ವರ್ಷದ ಬಜೆಟ್ ನಲ್ಲಿ ಅದನ್ನು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯರು ರಾಜ್ಯದ ಅಡಳಿತದ ಶಕ್ತಿದೇಗುಲವಾದ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕಚೇರಿಗೆ ತೆರಳಿ ಅಭಿನಂದನೆ ಪತ್ರ ಸಲ್ಲಿಸಿದರು.
ಸಂಘದ ನಿಯೋಗದೊಂದಿಗೆ ಮುಖ್ಯಮಂತ್ರಿಗಳು ರಾಜ್ಯದ ಸಾವಿರಾರು ಗ್ರಾಮೀಣ ಪತ್ರಕರ್ತರಿಗೆ ನಿಮ್ಮ ಘೋಷಣೆಯಿಂದ ತುಂಬ ಅನುಕೂಲ ಆಗಲಿದ್ದು, ನಿಮ್ಮ ಈ ಉದಾರತೆಗೆ ಪತ್ರಕರ್ತರ ಸಂಘ ಸದಾ ಚಿರ ಋಣಿಯಾಗಿರುತ್ತದೆ ಎಂದು ಶಿವಾನಂದ ತಗಡೂರು ಹೇಳಿದರು. ಇದಕ್ಕೆ ಮುಖ್ಯಮಂತ್ರಿಗಳು ನಗುತ್ತಲ್ಲೆ ಕೈಜೋಡಿಸಿದರು.
ನಿಯೋಗದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಪುಂಡಲಿಕ ಬಾಳೋಜಿ, ಭವಾನಿಸಿಂಗ್ ಠಾಕೂರ್, ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ರಾಜ್ಯ ಖಜಾಂಚಿ ವಾಸುದೇವ ಹೊಳ್ಳ, ಹಾಸನ ಜಿಲ್ಲಾ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಮದನಗೌಡ, ದ.ಕ. ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ, ಖಜಾಂಚಿ ಪುಷ್ಪರಾಜ್ ಬಿ.ಎನ್, ಬೀದರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ವಿಜಯನಗರ ಜಿಲ್ಲಾಧ್ಯಕ್ಷ ಸತ್ಯನಾರಾಯಣ, ರಾಯಚೂರಿನ ಗುರುನಾಥ್ ಮೊದಲಾದವರು ನಿಯೋಗದಲ್ಲಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


