ಬೆಂಗಳೂರು: ಇಲ್ಲಿ ನೀವು ಓಡಾಡ ಬೇಕಂದ್ರೆ ನಿಮ್ಮ ಗುಂಡಿಗೆ ಗಟ್ಟಿಯಿರಬೇಕು. ಬೆಂಗಳೂರಿನ ರಸ್ತೆಗಳೇ ಹಾಗೆ ರಸ್ತೆಗೂ ಗುಂಡಿಗಳಿಗೂ ಅವಿನಾಭಾವ ಸಂಬಂಧ. ಮಳೆ ಬಂದರೆ ಸಾಕು, ರಸ್ತೆ ಯಾವುದು? ಗುಂಡಿ ಯಾವುದು ಅನ್ನೋದೇ ಗೊತ್ತಾಗಲ್ಲ. ಇನ್ನು ಬ್ರಾಂಡ್ ಬೆಂಗಳೂರು ಕನಸು ಕಂಡಿರುವ ಡಿಕೆಶಿಯ ಕನಸು ನನಸಾಗೋ ಲಕ್ಷಣಗಳು ಕಾಣುತ್ತಿಲ್ಲ.
ಬಿಬಿಎಂಪಿ ಅಂತೂ ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಗಪ್ ಚುಪ್ ಆಗಿದೆ. ಎಸ್ ಸಿಲಿಕಾನ್ ಸಿಟಿಯಲ್ಲಿ ರಸ್ತೆಗಳು ಕಿತ್ತುಹೋಗಿ, ವಾಹನ ಸವಾರರಿಗೇ ಸವಾಲು ಹಾಕುತ್ತಿದೆ. ಅದೆಷ್ಟೋ ಮಂದಿ ರಸ್ತೆ ಗುಂಡಿಗಳಲ್ಲಿ ಬಿದ್ದು ಅಪಘಾತವಾಗಿರೊ ಉದಾಹರಣೆಗಳಿವೆ. ಇನ್ನು ಬೆಂಗಳೂರಿನಲ್ಲಿ ಮಳೆ ಬಂದರೆ ಬದುಕು ಚಿಂದಿ ಚಿತ್ರಾನ್ನವಾಗುವುದರಲ್ಲಿ ಎರಡು ಮಾತಿಲ್ಲ. ಒಂದು ಕಡೆ ಮಳೆ, ಮತ್ತೊಂದು ಕಡೆ ಗುಂಡಿಗಳಿಂದ ವಾಹನ ಸವಾರರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡ್ತಾರೆ. ಇನ್ನು ಬ್ರಾಂಡ್ ಬೆಂಗಳೂರು ಅಡಿಯಲ್ಲಿ ಗುಂಡಿಗಳನ್ನು ಮುಚ್ಚುವ ಕಾರ್ಯದಲ್ಲಿ ಬಿಬಿಎಂಪಿ ಕಂಪ್ಲೀಟ್ ಫೇಲ್ ಆಗಿದೆ.
ಕಳೆದ ಮೂರ್ನಾಲ್ಕು ದಿನ ಮಳೆ ಸುರಿಯುತ್ತಿದ್ದಂತೆ ರಾಜಧಾನಿ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬಾಯ್ದೆರೆದಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಕಬ್ಬನ್ ಪಾರ್ಕ್, ಕುಮಾರ ಕೃಪ ಈಸ್ಟ್, ಸ್ವಸ್ತಿಕ್ ಜಂಕ್ಷನ್, ಸಂಪಿಗೆ ರಸ್ತೆ ಸಿಗ್ನಲ್, ರಿಂಗ್ ರಸ್ತೆ, ಸುಮ್ಮನಹಳ್ಳಿ ಮೇಲ್ಸೇತುವೆ, ನಾಗರಭಾವಿ, ವಿಲ್ಸನ್ ಗಾರ್ಡನ್, ಮೈಸೂರು ರಸ್ತೆ, ಕನಕಪುರ ರಸ್ತೆ, ಲಗ್ಗೆರೆ, ಪೀಣ್ಯ ಕೈಗಾರಿಕಾ ಪ್ರದೇಶ, ಶಿವಾನಂದ ವೃತ್ತ, ಮಲ್ಲೇಶ್ವರ ರೈಲ್ವೆ ಪ್ಯಾರಲಲ್ ರಸ್ತೆ, ಯಶವಂತಪುರ, ಕಾರ್ಡ್ ರಸ್ತೆ ಸೇರಿದಂತೆ ನಗರದ ಪ್ರಮುಖ ಬಡಾವಣೆಯ ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿಯಾಗಿವೆ. ಮುಖ್ಯ ರಸ್ತೆಗಳ ಅಕ್ಕ-ಪಕ್ಕದ ಸರ್ವೀಸ್ ರಸ್ತೆಗಳ ಸ್ಥಿತಿ ಅಂತೂ ಕೇಳೋದೇ ಬೇಡ. ಇತ್ತ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಳೆಯಿಂದಾಗಿ ಸಂಕಷ್ಟಕ್ಕೀಡಾದ ಜನರ ಗೋಳನ್ನ ಕೇಳೋರೇ ಇಲ್ಲದಂತಾಗಿದೆ.
ಬಿಬಿಎಂಪಿ ಅಧಿಕಾರಿಗಳು ಮಳೆ ಬಂದಾಗ ಮತ್ತು ರಸ್ತೆ ಗುಂಡಿಯಿಂದ ಅಪಘಾತ ಉಂಟಾದಾಗ ಮಾತ್ರ, ರಸ್ತೆ ಗುಂಡಿ ಮುಚ್ಚುತ್ತೇವೆ. ಸರಿಪಡಿಸಿ ಗುಂಡಿ ಮುಕ್ತ ಮಾಡುತ್ತೇವೆ ಎನ್ನುತ್ತಾರೆ. ಮಳೆ ಕಡಿಮೆ ಆಗುತ್ತಿದಂತೆ ರಸ್ತೆ ಗುಂಡಿ ಮುಚ್ಚುವುದನ್ನು ಮರೆತು ಬಿಡುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಳಪೆ ಕಾಮಗಾರಿಯಿಂದ ಮಳೆ ಬಂದಾಗ ರಸ್ತೆ ಗುಂಡಿಗಳು ಕಾಣಿಸಿಕೊಳ್ಳುತ್ತವೆ. ಕಳಪೆ ಕಾಮಗಾರಿ ಆಗದಂತೆ ಬಿಬಿಎಂಪಿ ಅಧಿಕಾರಿಗಳು ನಿಗಾ ವಹಿಸುವುದಿಲ್ಲವಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿ ವರ್ಷ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಕೋಟ್ಯಾಂತರ ರುಪಾಯಿ ವೆಚ್ಚ ಮಾಡಲಾಗುತ್ತದೆ. ಮುಚ್ಚಿದ ರಸ್ತೆ ಗುಂಡಿಗಳು ಕೆಲವೇ ದಿನಗಳಲ್ಲಿ ಬಾಯ್ದರೆದುಕೊಳ್ಳುತ್ತವೆ ಎಂದು ವಾಹನ ಸವಾರರು ದೂರಿದ್ದಾರೆ.
ಮಳೆ ಮುಂದುವರೆ ಮತ್ತಷ್ಟು ಗುಂಡಿ: ನಗರದಲ್ಲಿ ಇನ್ನೊಂದು ವಾರ ಇದೇ ರೀತಿ ಮಳೆ ಮುಂದುವರೆಗೆ ಇನ್ನಷ್ಟು ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಬಿಬಿಎಂಪಿಯ ಅಧಿಕಾರಿಗಳು ಮಳೆಗಾಲದಲ್ಲಿ ರಸ್ತೆ ಗುಂಡಿ ಮುಚ್ಚುವುದಕ್ಕೆ ಇನ್ನೂ ಯಾವುದೇ ತಯಾರಿ ಮಾಡಿಕೊಂಡಂತೆ ಕಂಡು ಬಂದಿಲ್ಲ. ಒಟ್ಟಾರೆ ಸಿಟಿಯಲ್ಲಿ ವರ್ಷಧಾರೆಗೆ ನಗರದ ಹಲವು ಭಾಗಗಳು ನಲುಗಿಹೋಗಿದೆ. ಬಿಬಿಎಂಪಿ ಬಂಡವಾಳ ಬಯಲಾಗ್ತಿದೆ. ಸಾವಿರಾರು ಕೋಟಿ ಖರ್ಚು ಮಾಡಿ ಅಭಿವೃದ್ಧಿ ಮಾಡ್ತಿದಿವಿ ಅಂತಾ ಹೇಳೋ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಪುಳ್ಳು ಮಾತುಗಳಿಗೂ ಅರ್ಥವಿಲ್ಲದಂತಾಗಿದೆ. ಹೀಗಾಗಿ ಇನ್ನು ಮುಂದಾದರೂ ಈ ರೀತಿಯ ಮಳೆಗೆ ಬೇಕಾದ ಅಗತ್ಯ ಸಿದ್ಧತೆಗಳನ್ನ ಬಿಬಿಎಂಪಿ ಮಾಡಿಕೊಳ್ಳುತ್ತಾ ಎಂದು ಕಾದು ನೋಡಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


