ಭಾನುವಾರ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಇರಾನ್ ಅಧ್ಯಕ್ಷ ಇಬ್ರಾಹೀಂ ರಯಿಸೀ ಹಾಗೂ ವಿದೇಶಾಂಗ ಸಚಿವ ಹುಸೈನ್ ಅಮಿರ್ ಅಬ್ದುಲಹಿಯಾನ್ ಹಾಗೂ ಇತರ ಆರು ಮಂದಿಯ ಅಂತ್ಯಕ್ರಿಯೆಯ ಪ್ರಯುಕ್ತ ಆಯೋಜಿಸಲಾದ ಪ್ರಾರ್ಥನಾ ಸಭೆಯ ನೇತೃತ್ವವನ್ನು, ಇರಾನ್ ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಾಮಿನೈ ವಹಿಸಿದ್ದರು. ಈ ವೇಳೆ ಲಕ್ಷಾಂತರ ಮಂದಿ ಭಾಗಿಯಾಗಿ ನಾಯಕನಿಗೆ ವಿದಾಯ ಹೇಳಿದರು.
ಟೆಹರಾನ್ ವಿಶ್ವವಿದ್ಯಾನಿಲಯದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದಿದ್ದು, ಈ ವೇಳೆ ಮೃತರನ್ನು ಇರಿಸಲಾಗಿದ್ದ ಮೃತದೇಹಪೆಟ್ಟಿಗೆಗಳ ಮೇಲೆ ಇರಾನ್ ನ ರಾಷ್ಟ್ರಧ್ವಜಗಳನ್ನು ಹೊದಿಸಿ ಗೌರವ ಸೂಚಿಸಲಾಯಿತು. ಇರಾನ್ ಅಧ್ಯಕ್ಷರ ಅಂತಿಮ ಯಾತ್ರೆಯ ವಿರುದ್ದ ಪ್ರತಿಭಟನೆಗಳನ್ನು ನಡೆಸುವುದು ಹಾಗೂ ಆನ್ ಲೈನ್ ನಲ್ಲಿ ಅವಹೇಳನಕಾರಿ ಪೋಸ್ಟ್ ಗಳನ್ನು ಪ್ರಕಟಿಸುವುದರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಇದೇ ವೇಳೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಸಾಮೂಹಿಕ ಪ್ರಾರ್ಥನೆಯ ಸಂದರ್ಭ ಇರಾನ್ ನ ಹಂಗಾಮಿ ಅಧ್ಯಕ್ಷ ಮೊಹಮ್ಮದ್ ಮುಖ್ ಬೀರ, ಅಯಾತೊಲಾ ಖಾಮಿನೈ ಅವರ ಬಳಿ ಶೋಕತಪ್ತರಾಗಿ ನಿಂತಿರುವುದು ಕಂಡುಬಂದಿತು. ಬಳಿಕ ಮೃತದೇಹಗಳನ್ನು ಇರಿಸಲಾದ ಮೃತದೇಹದಪೆಟ್ಟಿಗೆಗಳನ್ನು ಮೆರವಣಿಗೆಯ ಮೂಲಕ, ರಯಿಸೀ ಅವರು ಈ ಮೊದಲು ಭಾಷಣಗಳನ್ನು ಮಾಡಿದ್ದ ಅಝಾದಿ ಚೌಕಕ್ಕೆ ತರಲಾಯಿತು. ಇರಾನ್ ನ ಅರೆಸೈನಿಕ ಪಡೆಯಾದ ರೆವೆಲ್ಯೂಶನರಿ ಗಾರ್ಡ್‌ನ ಉನ್ನತ ನಾಯಕರು ಕೂಡಾ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


