ಬೆಂಗಳೂರು : ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕಿಸಿಕೊಡುವಲ್ಲಿ ಕೇಂದ್ರ ಕೃಷಿ ಬೆಲೆ ಆಯೋಗದ ಪಾತ್ರ ಬಹಳ ಮಹತ್ವ ವಾದದ್ದು ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ವೆಚ್ಚ ಹಾಗೂ ಬೆಲೆಗಳ ಆಯೋಗ ಮತ್ತು ರಾಜ್ಯ ಕೃಷಿ ಇಲಾಖೆ ಸಹಭಾಗಿತ್ವದಲ್ಲಿ ನಗರದ ಕೃಷಿ ಆಯುಕ್ತಾಲಯದ ಸಂಗಮ ಸಭಾಂಗಣದಲ್ಲಿ ಏರ್ಪಡಿಸಿದ್ದ ಹಿಂಗಾರು ಹಂಗಾಮಿನ ಬೆಳೆಗಳ ಬೆಲೆ ನೀತಿ: 2025- 26 ನೇ ಸಾಲಿನ ಮಾರಾಟ ಅವಧಿ ಕುರಿತು ದಕ್ಷಿಣ ರಾಜ್ಯಗಳ ಪ್ರತಿನಿಧಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಬೆಳೆಯುವ ಬೆಳೆಗಳಿಗೆ ಉತ್ಪಾದನಾ ವೆಚ್ಚ ಹಾಗೂ ಸಾಗಾಟ, ಮಾರಾಟ ವೆಚ್ಚ ಪರಿಗಣಿಸಿ ವೈಜ್ಞಾನಿಕವಾದ ಬೆಂಬಲ ಬೆಲೆ ನಿಗದಿಯಾಗಬೇಕು. ಡಾ.ಸ್ವಾಮಿನಾಥನ್ ಅವರ ವರದಿ ಜಾರಿಯಾಗಬೇಕು ಎಂದು ಸಚಿವರು ಹೇಳಿದರು.
ಜಾಗತಿಕ ಕೃಷಿಯಲ್ಲಿ ಭಾರತ ದೇಶ ಮತ್ತು ಕರ್ನಾಟಕ ರಾಜ್ಯದ ಪಾತ್ರ ಮಹತ್ವದ್ದು.ಅನೇಕ ಏಳು ಬೀಳುಗಳ ನಡುವೆಯೂ ನಾವು ಸ್ಥಿರತೆ ಕಂಡುಕೊಂಡಿದ್ದೇವೆ. ಕಳೆದ ಎರಡು ದಶಕಗಳಲ್ಲಿ ಬಹುತೇಕ ವರ್ಷ ಬರ ,ಕೆಲ ವರ್ಷ ಅತಿವೃಷ್ಟಿ ನಮ್ಮನ್ನು ಕಾಡಿದೆ . ಬೆಳೆದ ಬಳೆ ಕೈ ಸೇರುತ್ತಿಲ್ಲ .ಇಂತಹ ಸಂದರ್ಭಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ರೈತರ ಸಂಕಷ್ಟಕ್ಕೆ ಇನ್ನಷ್ಟು ಹೆಚ್ಚು ಸ್ಪಂದಿಸಿ ನೆರವಾಗಬೇಕಿದೆ ಎಂದು ಎನ್.ಚಲುವರಾಯಸ್ವಾಮಿ ಹೇಳಿದರು.
ರಾಜ್ಯ ಸರ್ಕಾರದ ರೈತರ ಹಿತ ಕಾಯಲು ಅನೇಕ ಪ್ರಮುಖ ಯೋಜನೆ ರೂಪಿಸಿ ಜಾರಿಗೊಳಿಸಿದೆ. ಇದನ್ನು ತಲುಪಿಸುವಲ್ಲಿ ಅಧಿಕಾರಿಗಳ ಜವಾಬ್ದಾರಿ ದೊಡ್ಡದು ಎಂದು ಚಲುವರಾಯಸ್ವಾಮಿ ತಿಳಿಸಿದರು.
ಕೇಂದ್ರ ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ಅಧ್ಯಕ್ಷರಾದ ವಿಜಯ್ ಪಾಲ್ ಶರ್ಮ ಕೃಷಿ ಸವಾಲುಗಳು ,ಬೆಂಬಲ ಬೆಲೆ ನಿಗದಿ ಮಾನದಂಡಗಳು, ಆಗಬೇಕಿರುವ ಸುಧಾರಣೆಗಳು, ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾತ್ರದ ಬಗ್ಗೆ ವಿವರಿಸಿದರು.
ಸುಸ್ಥಿರ ಕೃಷಿಗೆ ಬೆಲೆ ಸ್ಥಿರೀಕರಣದ ಜೊತೆಗೆ ಉತ್ಪಾದನೆ ,ಮಾರಾಟವೆಚ್ಚದಲ್ಲಿ ಕಡಿತ ಮುಖ್ಯವಾಗಿದೆ .ಇದಕ್ಕೆ ತಂತ್ರಜ್ಞಾನ , ಯಾಂತ್ರೀಕರಣಗಳ ವರ್ಗಾವಣೆ ಜೊತೆಗೆ ವಿಶ್ವ ವಿದ್ಯಾನಿಲಯಗಳ ಸಂಶೋಧನೆಗಳು ಸುಲಭವಾಗಿ ಕೃಷಿಕರ ನೆಲ ತಲುಪಬೇಕು ಎಂದು ಅವರು ಹೇಳಿದರು.
ಕೇಂದ್ರ ಕೃಷಿ ಬೆಲೆ ಆಯೋಗದ ಸದಸ್ಯರಾದ ಡಾ. ನವೀನ್ ಪ್ರಕಾಶ್ ಸಿಂಗ್, ರತನ್ ಲಾಲ್ ಡಗ, ಅನುಪಮ್ ಮಿತ್ರ,ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್,ಕೃಷಿ ಆಯುಕ್ತರಾದ ವೈ.ಎಸ್ ಪಾಟೀಲ್ ,ನಿರ್ದೇಶಕರಾದ ಡಾ ಜಿ.ಟಿ ಪುತ್ರ ಮತ್ತಿತರರು ಹಾಜರಿದ್ದರು.
ದಕ್ಷಿಣ ಭಾರತದ ಐದು ರಾಜ್ಯಗಳಾದ ಕರ್ನಾಟಕ ,ಕೇರಳ, ತಮಿಳುನಾಡು,ಆಂದ್ರ ಪ್ರದೇಶ , ತೆಲಂಗಾಣ ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


