ಶ್ರವಣಬೆಳಗೊಳ: ಜಗತ್ತನ್ನೇ ತನ್ನತ್ತ ಸೆಳೆಯುವ ದಿವ್ಯಶಕ್ತಿ ಹೊಂದಿರುವ, ತ್ಯಾಗ, ಅಹಿಂಸೆ, ನಿಸ್ವಾರ್ಥತೆಯನ್ನು ಸಾರುವ ಶ್ರವಣಬೆಳಗೊಳದ ಭಗವಾನ್ ಬಾಹುಬಲಿಯ ವೀಕ್ಷಣೆಗಾಗಿ ಬಹುದಿನಗಳ ಬಯಕೆಯಿಂದ ಬಂದಿದ್ದೇವೆ ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಬೆಂಗಳೂರಿನ ರಾಜಾಜಿನಗರ ಪೆಡಲ್ ಪವರ್ ಸಂಘದ ವತಿಯಿಂದ ಶನಿವಾರ ಸಂಜೆ ಸೈಕಲ್ ಜಾಥಾ ಮೂಲಕ ಶ್ರವಣಬೆಳಗೊಳಕ್ಕೆ ಆಗಮಿಸಿದ ಅವರು, ಹುಣ್ಣಿಮೆಯ ದಿನ ಶ್ರವಣಬೆಳಗೊಳಕ್ಕೆ ಭೇಟಿ ನೀಡಿ ಬೆಳದಿಂಗಳಲ್ಲಿ ಬಾಹುಬಲಿ ಮೂರ್ತಿಯನ್ನು ಕಣ್ತುಂಬಿಕೊಳ್ಳಬೇಕು ಎಂಬ ಅಪೇಕ್ಷೆ ಹೊಂದಿದ್ದೆವು ಎಂದರು.
ನಮ್ಮ ತಂಡವು ಪ್ರತಿ ತಿಂಗಳು 350 ರಿಂದ 400 ಕಿಲೋಮೀಟರ್ ಸೈಕಲ್ ಮೂಲಕ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಆಗಮಿಸುತ್ತೇವೆ. ಅದೇ ರೀತಿ ಈಗಾಗಲೇ ಧರ್ಮಸ್ಥಳ, ಪಾಂಡಿಚೆರಿಗೆ ಭೇಟಿ ನೀಡಿದ್ದು ಈ ವರ್ಷದ ಕೊನೆಯಲ್ಲಿ ಕನ್ಯಾಕುಮಾರಿಗೆ ಸೈಕಲ್ ಮೂಲಕ ತೆರಳುವ ಉದ್ದೇಶ ಹೊಂದಿದ್ದೇವೆ ಎಂದರು.
2018ರ ಮಹಾಮಸ್ತಕಾಭಿಷೇಕದಲ್ಲಿ ನಾನು ಶ್ರವಣಬೆಳಗೊಳಕ್ಕೆ ಭೇಟಿ ನೀಡಿದ್ದೆ, ಹಿಂದಿನ ಚಾರುಕೀರ್ತಿ ಶ್ರೀಗಳ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆ ಅಪಾರವಾದುದು ಎಂದರು.
ಈ ಸಂದರ್ಭದಲ್ಲಿ ಶ್ರೀಕ್ಷೇತ್ರದ ವತಿಯಿಂದ ಸುರೇಶ್ ಕುಮಾರ್ ಹಾಗೂ ತಂಡದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀಮಠದ ಕಾರ್ಯಕರ್ತರಾದ ರಾಜೇಶ್ ಖನ್ನಾ, ನಾಗೇಂದ್ರ, ಪೆಡಲ್ ಪವರ್ ತಂಡದ ಮಹೇಶ್, ಹರೀಶ್, ರಾಘವ್, ಬಾಲಕೃಷ್ಣ, ದಿವಾಕರ್, ಪ್ರಸನ್ನ, ಶಶಾಂಕ್, ಚಂದನ್, ಗೋಪಿ ಮುಂತಾದವರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


