ತುಮಕೂರು: ಮಕ್ಕಳ ಮಾರಾಟ ಜಾಲವನ್ನು ಪತ್ತೆಹಚ್ಚಿರುವ ತುಮಕೂರು ಜಿಲ್ಲಾ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಮಾರಾಟ ಮಾಡಲಾಗಿದ್ದ 5 ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಮಹೇಶ ಯು.ಡಿ., ಮಹಬೂಬ್, ಕೆ.ಎನ್. ರಾಮಕೃಷ್ಣಪ್ಪ, ಹನುಮಂತರಾಜು, ಮುಬಾರಕ್ ಪಾಷ, ಪೂರ್ಣಿಮಾ ಹಾಗೂ ಸೌಜನ್ಯ ಎಂಬ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಜೂನ್ 9ರಂದು ರಾತ್ರಿ ಗುಬ್ಬಿ ತಾಲೂಕಿನ ಅಂತಾಪುರ ಬಳಿ ಮಹಾದೇವಿ ರವರ 11 ತಿಂಗಳ ಮಗುವನ್ನು ದುಷ್ಕರ್ಮಿಗಳು ಅಪಹರಿಸಿರುವ ಬಗ್ಗೆ ಗೋಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೇವಸ್ಥಾನದ ಬಳಿ ಸಂತ್ರಸ್ತ ತನ್ನ ಕುಟುಂಬದೊಂದಿಗೆ ಮಲಗಿದ್ದಾಗ ರಾತ್ರಿ ವೇಳೆಯಲ್ಲಿ 11 ತಿಂಗಳ ಮಗುವನ್ನು ವ್ಯವಸ್ಥಿತ ರೀತಿಯಲ್ಲಿ ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪೊಲೀಸ್ ತಂಡವನ್ನು ರಚನೆ ಮಾಡಲಾಗಿತ್ತು.
ತನಿಖಾ ತಂಡವು ಮಗುವನ್ನು ಕಳ್ಳತನ ಮಾಡಿದ ಆರೋಪದ ಮೇರೆಗೆ ಗುಬ್ಬಿ ತಾಲ್ಲೂಕು ಬಿಕ್ಕೇಗುಡ್ಡವಾಸಿ ರಾಮಕೃಷ್ಣ ಹಾಗೂ ತುಮಕೂರು ನಗರ ಭಾರತೀ ನಗರದ ವಾಸಿ ಹನುಮಂತರಾಜು ಬಿನ್ ಲೇಟ್ ಕರಿಯಪ್ಪ ಎಂಬುವರನ್ನು ಬಂಧಿಸಿದ್ದರು.
ಅವರು ನೀಡಿದ ಮಾಹಿತಿ ಆಧಾರದ ಮೇಲೆ ಹಾಗೂ ಮತ್ತೊಬ್ಬ ಆರೋಪಿ, ಈ ಹಿಂದೆ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ ಆಗಿ ಕೆಲಸ ಮಾಡುತ್ತಿದ್ದ, ಅಶೋಕ ನಗರದ ವಾಸಿ ಮಹೇಶ್ ಯು.ಡಿ. ಬಿನ್ ಯು.ಸಿ. ದೊಡ್ಡಯ್ಯ ಅವರನ್ನು ವಶಕ್ಕೆ ಪಡೆದರು.
ಆರೋಪಿಗಳು 1,75,000/- ರೂಪಾಯಿಗಳಿಗೆ ಮಗುವನ್ನು ಬೆಳ್ಳೂರು ಕ್ರಾಸ್ ನ ಮುಬಾರಕ್ ಗೆ ಮಾರಾಟ ಮಾಡಿದ ವಿಷಯ ಬೆಳಕಿಗೆ ಬಂದಿದೆ. ನಂತರ ಪೊಲೀಸರು ಮುಬಾರಕ್ ನ್ನು ದಸ್ತಗಿರಿ ಮಾಡಿ ಮಗುವನ್ನು ರಕ್ಷಿಸಿದ್ದಾರೆ.
ಈ ಪ್ರಕರಣದ ಆರೋಪಿ ಮಹೇಶ್, ಅವಿವಾಹಿತ ಗರ್ಭಧರಿಸಿದ ಮಹಿಳೆಯರನ್ನು ಹಾಗೂ ಅಕ್ರಮ ಸಂಬಂಧದಿಂದ ಗರ್ಭಧರಿಸಿದವರನ್ನು ಪತ್ತೆ ಮಾಡಿ, ಅವರಿಂದ ಮಕ್ಕಳನ್ನು ಪಡೆದುಕೊಂಡು, ಮಕ್ಕಳು ಇಲ್ಲದ ದಂಪತಿಗಳಿಗೆ ಹೆಚ್ಚಿನ ಹಣ ಪಡೆದು 2 ರಿಂದ 3ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ.
ಈ ಕೃತ್ಯಕ್ಕೆ ಹುಳಿಯಾರಿನ ಮಹೆಬೂಬ್ ಷರೀಫ್ ಸಹಕರಿಸಿದ್ದು, ಈತನು ಹುಳಿಯಾರಿನಲ್ಲಿ ತನ್ನ ಹೆಂಡತಿಯ ಹೆಸರಿನಲ್ಲಿ ಖಾಸಗೀ ಆಸ್ಪತ್ರೆಯನ್ನು ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ಈತನು ಹುಳಿಯಾರು ಹೋಬಳಿ ಗೂಬೆ ಹಳ್ಳಿಯಲ್ಲಿ ಪಿ.ಹೆಚ್.ಸಿ ಯಲ್ಲಿ ಫಾರ್ಮಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. ಇವರ ಹೇಳಿಕೆಯನ್ನು ಆಧರಿಸಿ, ಆರೋಪಿಗಳು ಮಾರಾಟ ಮಾಡಿದ್ದ 09 ಮಕ್ಕಳ ಪೈಕಿ 05 ಮಕ್ಕಳನ್ನು ರಕ್ಷಿಸಿದ್ದಾರೆ. ಅದ್ರಲ್ಲಿ ಒಂದು ಮಗು ಮೃತ ಪಟ್ಟಿದ್ದು, ಇನ್ನೊಂದು ಮಗುವನ್ನು ಪೋಷಕರಿಗೆ ಹಿಂದಿರುಗಿಸಿರುತ್ತಾರೆ. ರಕ್ಷಿಸಿರುವ 05 ಮಕ್ಕಳ ಪೈಕಿ ಒಂದು ಮಗುವನ್ನು ಪೋಷಕರಿಗೆ ನೀಡಿದ್ದು, ಉಳಿದ 04 ಮಕ್ಕಳನ್ನು, ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ದತ್ತು ಸ್ವೀಕಾರ ಕೇಂದ್ರದಲ್ಲಿ ಇರಿಸಲಾಗಿದೆ.
ಆರೋಪಿಗಳಿಂದ ಮಗುವನ್ನು ಅಪಹರಿಸಲು ಬಳಸಿದ್ದ ಮಾರುತಿ 800 ಕಾರು, ನಗದು ಹಣ 50,000 & 04 ಮೊಬೈಲ್ ಗಳನ್ನು ಅಮಾನತುಪಡಿಸಲಾಗಿದೆ.
ಆರೋಪಿತರು ಮಾರಾಟ ಮಾಡಿದ ಮಕ್ಕಳ ಜನನದ ಬಗ್ಗೆ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಜನನ ದೃಢೀಕರಣ ಪತ್ರವನ್ನು ನೀಡಿರುವುದು ಬೆಳಕಿಗೆ ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


