ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರಿಗೆ ಈಗ 113ನೇ ಜನ್ಮದಿನದ ಸಂಭ್ರಮ. 113 ನೇ ವಯಸ್ಸಿಗೆ ಕಾಲಿಟ್ಟ ಸಾಲುಮರದ ತಿಮ್ಮಕ್ಕ, ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದಾಕೆ.
ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ. ಈಕೆ ಮುಂದಿನ ಪೀಳಿಗೆಯ ಒಳಿತಿಗಾಗಿ ಮರಗಳಿಗೆ ನೀರುಣಿಸಿ ಬೆಳೆಸಿದ್ದಾಳೆ. ಅವರ ಈ ಕೆಲಸವನ್ನು ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿಯಿತ್ತು ಸನ್ಮಾನಿಸಲಾಗಿದೆ. ಅಮೇರಿಕ ಸಂಯುಕ್ತ ಸಂಸ್ಥಾನದ ಲಾಸ್ ಏಂಜಲೀಸ್ ಮತ್ತು ಓಕ್‌ಲ್ಯಾಂಡ್, ಕ್ಯಾಲಿಫೋರ್ನಿಯಗಳಲ್ಲಿ ಸ್ಥಿತವಾಗಿರುವ ಪರಿಸರ ಶಿಕ್ಷಣಕ್ಕಾಗಿ ತಿಮ್ಮಕ್ಕರವರ ಸಂಪನ್ಮೂಲಗಳು ಎಂಬ ಪರಿಸರವಾದಿ ಸಂಘಟನೆಯ ಹೆಸರನ್ನು ತಿಮ್ಮಕ್ಕ ಅವರನ್ನು ಆಧರಿಸಿ ಇಡಲಾಗಿದೆ.
ತಿಮ್ಮಕ್ಕ ಅವರು ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರು. ತಂದೆ ಚಿಕ್ಕರಂಗಯ್ಯ. ತಾಯಿ ವಿಜಯಮ್ಮ. ಇವರಿಗೆ ಕೌಟುಂಬಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಯಾವುದೇ ಔಪಚಾರಿಕ ಶಿಕ್ಷಣ ಸಿಕ್ಕಿಲ್ಲ. ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿದ್ದರು. ಇವರು ಚಿಕ್ಕಯ್ಯ ಎಂಬುವವರನ್ನು ವಿವಾಹವಾಗಿದ್ದರು. ಅವರು ವೃತ್ತಿಯಲ್ಲಿ ಗೋಪಾಲಕರಾಗಿದ್ದು, ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದವರು. ಮದುವೆ ಬಳಿಕ ಸಾಲುಮರದ ತಿಮ್ಮಕ್ಕ ಅವರು 1950 ಮತ್ತು 1970 ರ ಅವಧಿಯಲ್ಲಿ ಹುಲಿಕಲ್-ಕುದೂರು ಹೆದ್ದಾರಿಯಲ್ಲಿ ಸುಮಾರು ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ 385 ಮರಗಳನ್ನು ನೆಟ್ಟು ಬೆಳೆಸಿದ್ದರು. ತಿಮ್ಮಕ್ಕ ಅವರು 2019ರಲ್ಲಿ ಪದ್ಮ ಶ್ರೀ ಪ್ರಶಸ್ತಿ ಪಡೆದಿದ್ದರು.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ತಿಮ್ಮಕ್ಕನಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಶುಭಾಶಯ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಪರಿಸರ ಪ್ರೇಮಿ, ವೃಕ್ಷಮಾತೆ, ಮರಗಳನ್ನು ತನ್ನ ಮಕ್ಕಳಂತೆ ಬೆಳೆಸಿದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಮರಗಳನ್ನು ನೆಟ್ಟು ಪೋಷಿಸುವ ನಿಮ್ಮ ಸಮರ್ಪಣೆ ಇಡೀ ದೇಶಕ್ಕೆ ಸ್ಫೂರ್ತಿ. ದೇವರು ನಿಮಗೆ ಉತ್ತಮ ಆಯಸ್ಸು ಹಾಗೂ ಆರೋಗ್ಯವನ್ನು ಕೊಟ್ಟು ಕಾಪಾಡಲೆಂದು ಎಂದು ಹಾರೈಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


