ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕಿ ಸವಳಂಗ ಗ್ರಾಮದ ಹೊರವಲಯದಲ್ಲಿರುವ ಹೊಸಕೆರೆಯಲ್ಲಿ ವಿಜಯನಗರ ಕಾಲದ ಪುರಾತನ ಶಿಲಾ ಶಿಲ್ಪ ಪತ್ತೆಯಾಗಿದೆ. ಮೇಲ್ನೋಟಕ್ಕೆ ಭೈರವ, ಕಾಳಿ ಮತ್ತು ವೀರಭದ್ರ ಶಿಲ್ಪಗಳಿಗೆ ಹೊಂದಾಣಿಕೆಯಾಗುವ ಲಕ್ಷಣಗಳಿವೆ.
ಚತುರ್ಭುಜಗಳಿದ್ದು, ಬಲ ಭಾಗದ ಮುಂಗೈನಲ್ಲಿ ಖಡ್ಗ ಮೇಲ್ಮುಖವಾಗಿ ಭುಜದ ಮೇಲಿದೆ.ಬಲಭಾಗದ ಇನ್ನೊಂದು ಕೈಯಲ್ಲಿ ತ್ರಿಶೂಲವಿದ್ದು ಎಡಗೈಯೊಂದು ಭಗ್ನಗೊಂಡಿದೆ. ಇನ್ನೊಂದು ಕೈಯಲ್ಲಿ ಪಾಶವಿರುವಂತ ಲಕ್ಷಣ ಶಿಲ್ಪದಲ್ಲಿ ಕಂಡುಬಂದಿದೆ. ಶಿರದ ಎಡ, ಬಲ ಭಾಗದಲ್ಲಿ ಸೂರ್ಯ ಚಂದ್ರರ ಕೆತ್ತನೆ ಇದೆ. ಶಿಲ್ಪದಲ್ಲಿ ಯಾವುದೇ ಶಾಸನ ಕೆತ್ತನೆ ಇಲ್ಲ. ಇದು ಯಾವ ರಾಜರ ಕಾಲದ್ದು, ಮತ್ತು ಏಕೆ ಕೆತ್ತಿಸಲಾಗಿತ್ತು ಎಂಬುದರ ಕುರಿತು ಸಂಶೋಧನೆ ನಡೆಯಬೇಕಿದೆ.
ಮತ್ತೊಂದೆಡೆ ಇತ್ತೀಚೆಗೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಮಾಚಲಘಟ್ಟ ಕುಗ್ರಾಮದ ಮಲ್ಲೇಶ್ವರ ದೇವಸ್ಥಾನದ ಬಳಿ ಹೊಯ್ಸಳರ ಕಾಲದ ಶಾಸನಗಳು ಮತ್ತು ರೇಖಾಚಿತ್ರಗಳು ಇರುವ ಅಪರೂಪದ ಕಲ್ಲು ಪತ್ತೆಯಾಗಿತ್ತು. ಪ್ರೀಮಿಯರ್ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್ (CIIL) ನ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರದ ಸಂಶೋಧಕರು ನಡೆಸಿದ ಕ್ಷೇತ್ರ ಕಾರ್ಯದಲ್ಲಿ ಶಿಲೆ ಪತ್ತೆಯಾಗಿತ್ತು. ತಜ್ಞರ ಪ್ರಕಾರ, ಇದು 16 ನೇ ಶತಮಾನದ ಶಿಲಾ ಶಾಸನವಾಗಿದ್ದು, ದುಷ್ಟಶಕ್ತಿಗಳನ್ನು ಗ್ರಾಮದಿಂದ ದೂರವಿಡಲು ಸ್ಥಾಪಿಸಲಾಗಿದೆ ಎಂದು ತಿಳಿದುಬಂದಿತ್ತು.
ಅಲ್ಲದೆ ಸಿಕ್ಕ ಚಪ್ಪಡಿ ಕಲ್ಲಿನಲ್ಲಿ ರೇಖೆಗಳನ್ನು ಕೆತ್ತಲಾಗಿದ್ದು, ಬರಹಗಳು ಮೋದಿ ಲಿಪಿಯಲ್ಲಿದ್ದವು. ಅರ್ಧ ಶಿಲೆ (ಮೇಲಿನ ಭಾಗ) ಮಾತ್ರ ಪತ್ತೆಯಾಗಿದ್ದು, ಇನ್ನೂ ಅರ್ಧ ಶಿಲೆ ಭೂಮಿಯೊಳಗೆ ಹುದುಗಿ ಹೋಗಿದೆ ಎಂದು ಹೇಳಲಾಗುತ್ತಿದೆ. ಹಿರಿಯ ಸಂಶೋಧನಾ ಸಹೋದ್ಯೋಗಿ ಶಶಿಧರ ಸಿಎ ಅವರು ಈ ಸಂಶೋಧನೆಯನ್ನು ನಡೆಸಿದರು. ಸಿಐಐಎಲ್ ನಿರ್ದೇಶಕ ಶೈಲೇಂದ್ರ ಮೋಹನ್ ಅವರ ಮಾರ್ಗದರ್ಶಕರಾಗಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


