ಕೊರಟಗೆರೆ: ಗಂಡನ ಮುಗಿಸಲು ಮಾಜಿ ಇನ್ಸ್ ಸ್ಟಾಗ್ರಾಂ ಲವರ್ ಮತ್ತು ತಮ್ಮನಿಗೆ ಪತ್ನಿ ಸುಫಾರಿ ನೀಡಿರುವ ಘಟನೆ ನಡೆದಿದ್ದು, ಮಾಜಿ ಲವರ್ ಜೊತೆಗೆ ಸೇರಲು ಅಡ್ಡಿಯಾಗಿದ್ದ ಗಂಡ ಪ್ರಕಾಶ್ ನನ್ನು ಪತ್ನಿ ಹರ್ಷಿತಾ ಬರ್ಬರವಾಗಿ ಹತ್ಯೆ ಮಾಡಿಸಿದ್ದಾಳೆ.
ಕೊರಟಗೆರೆ ತಾಲೂಕು ತುಂಬಾಡಿ ಮತ್ತು ಸಿದ್ದರಬೆಟ್ಟ ಸಂಪರ್ಕದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಗುಲ್ಬರ್ಗಾ ಜಿಲ್ಲೆಯ ಚಿಂಚುಳ್ಳಿ ಗ್ರಾಮದ ಪ್ರಕಾಶ(32) ಕೊಲೆಯಾದ ದುರ್ದೈವಿಯಾಗಿದ್ದಾನೆ.
3 ತಿಂಗಳ ಹಿಂದೆಯಷ್ಟೇ ಗಂಡ ಮತ್ತು ಮಗು ಬಿಟ್ಟು ಗುಂಡ ಎಂಬುವನ ಹಿಂದೆ ಹರ್ಷಿತಾ ಹೋಗಿದ್ದಳು. ಈ ವೇಳೆ ಪ್ರಕಾಶ್ ಪೊಲೀಸ್ ಠಾಣೆಗೆ ದೂರು ನೀಡಿ ಹರ್ಷಿತಾಳನ್ನು ಮತ್ತೆ ಮನೆಗೆ ಕರೆದುಕೊಂಡು ಬಂದಿದ್ದ.

ಕೊರಟಗೆರೆಯಿಂದ ಮಡದಿಯ ಜೊತೆ ಮಲ್ಲೇಕಾವುಗೆ ಪ್ರಕಾಶ್ ತೆರಳುತ್ತಿದ್ದ ವೇಳೆ ಪ್ರಕಾಶನ ಹೆಂಡತಿ ಹರ್ಷಿತಾ ತಮ್ಮ ಸೋಮ ಕರೆ ಮಾಡಿ, ಕುಡಿದು ಟೈಟ್ ಆಗಿದ್ದೀನಿ ಬಂದು ಕರೆದುಕೊಂಡು ಹೋಗು ಎಂದು ಹೇಳಿದ್ದು, ಹತ್ತಾರು ಬಾರಿ ಮತ್ತೆ ಮತ್ತೆ ಕರೆ ಮಾಡಿದ್ದ. ಹೀಗಾಗಿ ಮಡದಿಯನ್ನ ಮನೆಗೆ ಬಿಟ್ಟು ಸೋಮನನ್ನು ಕರೆತರಲು ಪ್ರಕಾಶ್ ಬರುತ್ತಿದ್ದ. ತುಂಬಾಡಿಗೆ ತಲುಪಿದ ವೇಳೆ ಕೆಪಿಟಿಸಿಎಲ್ ವಿದ್ಯುತ್ ಉಪ ಸ್ಥಾವರದ ಹತ್ತಿರ ವಾಹನ ಅಡ್ಡಗಟ್ಟಿದ 3 ಜನರ ಗ್ಯಾಂಗ್ ಪ್ರಕಾಶನ ಹೆಡೆಗೆ, ಹೊಟ್ಟೆಗೆ ಚಾಕು ಹಾಕಿ ಗಂಭೀರವಾಗಿ ಗಾಯಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದು, ಘಟನೆಯನ್ನು ಅಪಘಾತ ಎಂದು ಬಿಂಬಿಸಲು ಯತ್ನಿಸಿತ್ತು.
ದುಷ್ಕರ್ಮಿಗಳಿಂದ ದಾಳಿಗೊಳಗಾದ ಪ್ರಕಾಶ ಜೀವ ಉಳಿಸಿಕೊಳ್ಳಲು ರಸ್ತೆಯಲ್ಲಿ ಬಿದ್ದು ಒದ್ದಾಡುವ ಶಬ್ದ ಕೇಳಿ ಸ್ಥಳೀಯರು ಆತನನ್ನು ಆಸ್ಪತ್ರೆಗೆ ರವಾನಿಸಲು ಯತ್ನಿಸಿದ್ದಾರೆ. ಆದರೆ ಆತ ಸಾವಿಗೀಡಾಗಿದ್ದಾನೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನ ರಂಗಶಾಮಯ್ಯ(43), ಮಲ್ಲೇಕಾವಿನ ಸೋಮ(27) ಮತ್ತು ಹರ್ಷಿತಾ(28) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹರ್ಷಿತಾಳ ಇನ್ಸ್ ಸ್ಟಾಗ್ರಾಂ ಲವರ್ ಬೆಂಗಳೂರಿನ ಗುಂಡಾನಿಗಾಗಿ ಕೊರಟಗೆರೆ ಪೊಲೀಸರಿಂದ ತೀವ್ರ ಹುಡುಕಾಟ ನಡೆಯುತ್ತಿದೆ. ಕೊರಟಗೆರೆ ಸಿಪಿಐ ಅನಿಲ್ ಮತ್ತು ಪಿಎಸೈ ಚೇತನ್ ಕುಮಾರ್ ತೀವ್ರ ತನಿಖೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್, ಮಧುಗಿರಿ ಡಿವೈಎಸ್ಪಿ ರಾಮಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ 4 ಜನ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA