ಕನ್ನಡ ಚಿತ್ರರಂಗಕ್ಕೆ ಇರುವ ಕಂಟಕ ದೂರಾಗಲೆಂದು ಇತ್ತೀಚೆಗಷ್ಟೆ ಕಲಾವಿದರ ಸಂಘದ ವತಿಯಿಂದ ಹೋಮ, ಹವನ ವಿವಿಧ ರೀತಿಯ ಪೂಜೆಗಳನ್ನು ಮಾಡಿಸಲಾಯ್ತು. ನಟ ದೊಡ್ಡಣ್ಣ ದಂಪತಿ ಕಲಾವಿದರ ಪರವಾಗಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವು ಕಲಾವಿದರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದ ಬಗ್ಗೆ ಚಿತ್ರರಂಗದಲ್ಲಿ ಹೆಚ್ಚಿನ ಟೀಕೆಗಳೇನೂ ವ್ಯಕ್ತವಾಗಿರಲಿಲ್ಲ. ಆದರೆ ಈಗ ಸಾಮಾಜಿಕ ಕಾರ್ಯಕರ್ತರೊಬ್ಬರು ಕಲಾವಿದರ ಸಂಘದ ವಿರುದ್ಧ ಭ್ರಷ್ಟಾಚಾರ, ಅನೀತಿ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೆ ನಟ ದೊಡ್ಡಣ್ಣ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸಾಮಾಜಿಕ ಹೋರಾಟಗಾರ, ರಾಜಕಾರಣಿ ಎನ್.ಆರ್.ರಮೇಶ್ ಈ ಬಗ್ಗೆ ಮಾತನಾಡಿದ್ದು, ‘ಸಹಕಾರ ಸಂಘಗಳ ನಿಯಮದ ಅನುಸಾರ ಕಲಾವಿದರ ಸಂಘಕ್ಕೆ ಚುನಾವಣೆಗಳನ್ನು ನಡೆಸಲಾಗಿಲ್ಲ. ಕಲಾವಿದರ ಸಂಘದ ಯಾವೊಬ್ಬ ಪದಾಧಿಕಾರಿಯೂ ಸಹ ಸೂಕ್ತವಾಗಿ ಜವಾಬ್ದಾರಿಗಳನ್ನು ನಿಭಾಯಿಸಿಲ್ಲ. ನಿಯಮದ ಪ್ರಕಾರ ಲೆಕ್ಕ ಪರಿಶೋಧನಾ ವರದಿಯನ್ನು ಸಹ ಸಲ್ಲಿಸಿಲ್ಲ. ದೊಡ್ಡಣ್ಣ ಕಲಾವಿದರ ಸಂಘದ ಖಜಾಂಚಿ ಆಗಿದ್ದಾರೆ ಆದರೆ ಉಳಿದ ಪದಾಧಿಕಾರಿಗಳು ಯಾರು? ಅವರ ಕಾರ್ಯವೇನು ಎಂಬುದು ಯಾರಿಗೂ ಗೊತ್ತಿಲ್ಲ’ ಎಂದಿದ್ದಾರೆ ಎನ್.ಆರ್. ರಮೇಶ್.
ಕೇವಲ ಇಬ್ಬರು–ಮೂವರು ಕಲಾವಿದರ ಸಂಘವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಇದೆಲ್ಲ ನಿಲ್ಲಬೇಕು, ಸಹಕಾರ ಸಂಘಗಳ ನಿಯಮದ ಅನುಸಾರವಾಗಿ ಚುನಾವಣೆ ನಡೆದು ಪದಾಧಿಕಾರಿಗಳ ನೇಮಕ ಆಗಬೇಕು. ಅಲ್ಲದೆ ಲೆಕ್ಕ ಪರಿಶೋಧನಾ ವರದಿಯನ್ನು ಕೊಡದೇ ಇರುವ ಖಜಾಂಚಿ ದೊಡ್ಡಣ್ಣ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಬೇಕು ಎಂದು ಸಹ ಅವರು ಆಗ್ರಹಿಸಿದ್ದಾರೆ.
ಪೂಜೆ ನೆಪದಲ್ಲಿ ಕಲಾವಿದರು ಒಗ್ಗಟ್ಟಾಗಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿ, ‘ಕಲಾವಿದರಲ್ಲಿ ಎಲ್ಲಿದೆ ಒಗ್ಗಟ್ಟು? ಕಲಾವಿದರಲ್ಲಿ ಒಗ್ಗಟ್ಟು ಎನ್ನುವುದು ಎಂಟನೇ ಅದ್ಭುತ. ಕಲಾವಿದರ ಸಂಘದಲ್ಲಿ ರಾಕ್ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ ಇಬ್ಬರೇ ಇರೋದು. ಇನ್ನುಳಿದವರೆಲ್ಲ ನಾಮ್ಕೆ ವಾಸ್ತೆ ಅಷ್ಟೆ ಎಂದಿದ್ದಾರೆ ರಮೇಶ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


