ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಕೊರಳಿಗೆ ಸುತ್ತಿಕೊಂಡಿರುವ ಕುಣಿಕೆ ಇನ್ನಷ್ಟು ಬಿಗಿಯಾಗುತ್ತಾ ಸಾಗುತ್ತಿದೆ. ದರ್ಶನ್ ಅನ್ನು ಪ್ರಕರಣದ ಎ1 ಆರೋಪಿಯನ್ನಾಗಿ ಮಾಡಲು ಪೊಲೀಸರು ಈಗಾಗಲೇ ಸಿದ್ಧರಾಗಿದ್ದಾರೆ. ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುತ್ತಿದ್ದಂತೆ ತಮಗೆ ಜಾಮೀನು ಸಿಕ್ಕಿ ಬಿಡುತ್ತದೆ ಎಂಬ ನಿರೀಕ್ಷೆಯಲ್ಲಿ ದರ್ಶನ್ ಇದ್ದರು. ಆದರೆ ಈಗ ಎಲ್ಲವೂ ಉಲ್ಟಾ ಆಗಿದೆ. ದರ್ಶನ್ ಗೆ ಈ ಪ್ರಕರಣದಿಂದ ಮುಕ್ತಿ ಸಿಗುವುದು ಬಹಳ ಕಷ್ಟ ಎನ್ನಲಾಗುತ್ತಿದೆ. ಆದರೆ ಈ ಸಂಕಷ್ಟವನ್ನು ತಮಗೆ ತಾವೇ ತಂದುಕೊಂಡಿದ್ದಾರೆ ನಟ ದರ್ಶನ್.
ದರ್ಶನ್ ಪರವಾಗಿ ಈ ಮೊದಲು ರಂಗನಾಥ ರೆಡ್ಡಿ ಹಾಗೂ ಅವರ ಸಹಾಯಕರು ವಾದಿಸುತ್ತಿದ್ದರು. ಅದಾದ ಬಳಿಕ ದರ್ಶನ್ ಪರವಾಗಿ ನಾಡಿನ ಹೆಸರಾಂತ ಕ್ರಿಮಿನಲ್ ವಕೀಲ ಸಿವಿ ನಾಗೇಶ್ ಅವರನ್ನು ನೇಮಿಸಲಾಯಿತು. ಸಿವಿ ನಾಗೇಶ್ ಅವರ ಸಹಾಯಕರು ದರ್ಶನ್ ಪರವಾಗಿ ಈಗಾಗಲೇ ಕೆಲವು ಅರ್ಜಿಗಳನ್ನು ದಾಖಲಿಸಿ ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದರು.
ಆದರೆ ಈಗ ಪ್ರಕರಣ ಜಟಿಲವಾದಂತೆ ಪ್ರಮುಖ ವಕೀಲರೊಬ್ಬರು ದರ್ಶನ್ ಪ್ರಕರಣದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಪ್ರಕರಣವನ್ನು ತಾವೇ ಜಟಿಲಗೊಳಿಸಿಕೊಳ್ಳುತ್ತಿದ್ದಾರೆ ನಟ ದರ್ಶನ್. ಇತ್ತೀಚೆಗೆ ಬಿಡುಗಡೆ ಆಗಿರುವ ದರ್ಶನ್ ರ ಕೆಲವು ವಿಡಿಯೋ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿಸಿವೆ. ದರ್ಶನ್ ಜೈಲಿನಲ್ಲಿ ಅನಾರೋಗ್ಯ ಪೀಡಿತರಾಗಿದ್ದಾರೆ. ದರ್ಶನ್ ಒಬ್ಬಂಟಿಯಾಗಿದ್ದಾರೆ, ಏಕಾಂಗಿಯಾಗಿದ್ದಾರೆ ಎಂಬೆಲ್ಲ ಮಾತುಗಳು ಹರಿದಾಡುತ್ತಿದ್ದವು. ಆದರೆ ಈಗ ಹೊರಬಂದಿರುವ ಫೋಟೊಗಳ ಪ್ರಕಾರ ದರ್ಶನ್ ಜೈಲಿನ ಒಳಗೆ ಆಮಾರದ ಜೀವನ ನಡೆಸುತ್ತಿದ್ದಾರೆ. ಅವರಿಗೆ ಅಲ್ಲಿ ಐಶಾರಾಮಿ ಟ್ರೀಟ್ಮೆಂಟ್ ನೀಡಲಾಗುತ್ತಿದೆ.
ಈ ಚಿತ್ರ ಹೊರಬಿದ್ದ ಬಳಿಕ ದರ್ಶನ್ ಮೇಲಿನ ಸಿಂಪತಿ ಹೊರಟೇ ಹೋಗಿದ್ದು, ಸಾರ್ವಜನಿಕವಾಗಿ ಇನ್ನಷ್ಟು ಆಕ್ರೋಶ ಮೂಡಿದೆ. ಜೈಲಧಿಕಾರಿಗಳ ಬಗ್ಗೆಯೂ ಆಕ್ರೋಶ ಎದ್ದಿದೆ. ದರ್ಶನ್, ಜೈಲಿನೊಳಗೆ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಕೆಲವರು ಹೇಳಿಕೊಂಡಿದ್ದರು. ಆದರೆ ಅವರು ಜೈಲನ್ನು ಎಂಜಾಯ್ ಮಾಡುತ್ತಿದ್ದಂತಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.
ಈ ಫೋಟೊ ಹೊರಬಿದ್ದಿರುವ ಕಾರಣದಿಂದ ದರ್ಶನ್ಗೆ ಸಿಗಬಹುದಾಗಿದ್ದ ಜಾಮೀನು ಸಹ ಬಹುತೇಕ ತಪ್ಪಿ ಹೋದಂತಾಗಿದೆ. ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಬಳಿಕ ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸುವವರಿದ್ದರು. ಆದರೆ ಈಗ ದರ್ಶನ್ರ ಜಾಮೀನು ಅರ್ಜಿಗೆ ವಿರೋಧ ಸಲ್ಲಸಲು ಹಾಗೂ ಅದನ್ನು ನಿರಾಕರಿಸಲು ನ್ಯಾಯಾಧೀಶರಿಗೆ ಪ್ರಮುಖ ಕಾರಣವೇ ದೊರಕಿದಂತಿದೆ. ಇದೆಲ್ಲದರ ಜೊತೆಗೆ ದರ್ಶನ್ ಪರ ವಕೀಲಿಕೆ ಮಾಡಲು ಒಪ್ಪಿಕೊಂಡಿದ್ದ ಪ್ರಮುಖ ವಕೀಲ ನಾಗೇಶ್ ಅವರು ಸಹ ದರ್ಶನ್ ಪ್ರಕರಣದಿಂದ ಹಿಂದೆ ಸರಿದಿದ್ದಾರೆ ಎಂಬ ಸುದ್ದಿಗಳು ಸಹ ಹರಿದಾಡುತ್ತಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


