ದೊಡ್ಡಬಳ್ಳಾಪುರ: ಬಿಜೆಪಿ ಶಾಸಕ ಮುನಿರತ್ನಂ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಯುವ ಒಕ್ಕಲಿಗ ಗೆಳೆಯರ ಬಳಗ ಮತ್ತು ಕೆಂಪೇಗೌಡರ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘ ಪ್ರತಿಭಟನೆ ನಡೆಸಿತು.
ದೊಡ್ಡಬಳ್ಳಾಪುರ ನಗರದ ತಾಲ್ಲೂಕು ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಯಿತು. ಒಕ್ಕಲಿಗ ಸಮುದಾಯದ ಮಹಿಳೆಯರ ಬಗ್ಗೆ ಮುನಿರತ್ನಂ ಕೀಳುಮಟ್ಟದ ಭಾಷೆ ಪ್ರಯೋಗಿಸಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.
ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಒಕ್ಕಲಿಗ ಜನಾಂಗದ ಗುತ್ತಿಗೆದಾರರೊಬ್ಬರನ್ನು ಶಾಸಕ ಮುನಿರತ್ನಂ ನಾಯ್ಡು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ತುಚ್ಛವಾಗಿ ಮಾತನಾಡಿ ಗುತ್ತಿಗೆದಾರರನ್ನು ಹೆದರಿಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಪ್ರತಿಭಟನಾನಿರತರು ದೂರಿದರು.
ಬೆದರಿಕೆಯ ಬಗ್ಗೆ ಆಡಿಯೊ ಧ್ವನಿ ಮುದ್ರಣ ಸಾಮಾಜಿಕ ಜಾಲತಾಣದಲ್ಲಿ ಮತ್ತು ಟಿ.ವಿ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಒಬ್ಬ ಜವಾಬ್ದಾರಿಯುತ ಪ್ರತಿನಿಧಿಯಾದ ಶಾಸಕರು ಆಡಿರುವ ಮಾತುಗಳು ಮತ್ತು ನಿಂದಿಸಿರುವ ಶಬ್ದಗಳನ್ನು ಕೇಳಿದರೆ ಶಾಸಕ ಸ್ಥಾನಕ್ಕೆ ಅರ್ಹನಾಗಲು ಸಾಧ್ಯವಿಲ್ಲ. ರಾಜ್ಯಪಾಲರು ಮುನಿರತ್ನಂ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಡಿ.ಸಿ.ಶಶಿಧರ್, ವಿಶ್ವಾಸ್, ಎಚ್.ಮುನಿಪಾಪ್ಪಣ್ಣ, ನಾಗೇಶ್ ಸಿ.ಗೌಡ, ಹರ್ಷ ಗೌಡ, ಎಂ.ಸಿ.ಮನೋಹರ್, ವಕೀಲರಾದ ರವಿ, ಅಶೋಕ್ ಜೋಗಳ್ಳಿ, ದೀಪುಗೌಡ, ರೇವತಿ, ರತ್ನಮ್ಮ, ಸುನಂದ, ಶೋಭ ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q