- ಜೆ. ರಂಗನಾಥ, ತುಮಕೂರು.
ಸುತ್ತಲೂ ಬೆಟ್ಟ ಗುಡ್ಡಗಳು ,ಕೋಟೆ ಕೊತ್ತಲುಗಳು, ದೇಗುಲಗಳು ,ಇತಿಹಾಸ ಸಾರುವ ಶಾಸನ ಗಳನ್ನೊಳಗೊಂಡ ಮಹಾ ಸಂಸ್ಥಾನ ಮಿಡಿಗೇಶಿ.
ಈ ಐತಿಹಾಸಿಕ ನಾಡಲ್ಲಿ ನೆಲೆ ನಿಂತ ಶ್ರೀ ಸುಪಾರ್ಶ್ವನಾಥ ಹಾಗೂ ಬ್ರಹ್ಮ ಯಕ್ಷರ ಜಿನ ಮಂದಿರ ಪ್ರಕೃತಿ ಸೌಂದರ್ಯ ದೊಂದಿಗೆ ಜನರನ್ನು, ಇತಿಹಾಸ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿದೆ.
ಶ್ರೀ ಸುಪಾರ್ಶ್ವನಾಥ ಜೈನ ಬಸದಿ ಹೊಯ್ಸಳ ವಾಸ್ತು ಶಿಲ್ಪದಿಂದ ಕೂಡಿದ್ದು, ಬಸದಿಗೆ 10 ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿದೆ .ಈ ಬಸದಿಯನ್ನು ಉತ್ತರಾಭಿಮುಖವಾಗಿ ಬೆಟ್ಟದ ತಪ್ಪಲಿನಲ್ಲಿ ನಿರ್ಮಿಸಲಾಗಿದ್ದು, ಬಸದಿ ಗರ್ಭಗುಡಿ ,ಸುಖನಾಸಿ,ನವರಂಗ ,ಮುಖ ಮಂಟಪ ,ಪ್ರದಕ್ಷಣ ಪಥ ಹೊಂದಿದ್ದು, ಬಸದಿಯನ್ನು ನೆಲಮಟ್ಟದಿಂದ ಮೂರು ಅಡಿಗಳ ಎತ್ತರದಲ್ಲಿ ನಿರ್ಮಿಸಲಾಗಿದೆ . ಬಸದಿಯ ಎದುರು 27 ಅಡಿಗಳ ಎತ್ತರದ ಮಾನಸ್ತoಭವಿದ್ದು, ಮೇಲೆ ಚತುರ್ಮುಖ ಜಿನಬಿಂಬಗಳಿದ್ದು ಅವು ಕಾಯೋಸರ್ಗ ಬಂಗಿಯಲ್ಲಿವೇ.
ಬಸದಿಯ ನವರಂಗದ ಪ್ರವೇಶ ದ್ವಾರದಲ್ಲಿ ಜಯ -ವಿಜಯ ಲಲಾಟಾ ದಲ್ಲಿ ಕಮಲದಳ ವಿದ್ದು ನವರಂಗದಲ್ಲಿ ನಾಲ್ಕು ಕೆತ್ತನೆ ಕಂಬಗಳು, ಬೋದಿಗೆ ,ಭುವನೇಶ್ವರ ಹೊಂದಿದ್ದು, ನವರಂಗದ ಬಲಗಡೆ ತೀರ್ಥಂಕರ ವಿಗ್ರಹಗಳು, ಎಡಗಡೆ ಮಾತೆ ಪದ್ಮಾವತಿ, ಮಾತೆ ಮಾನವಿ ಹಾಗೂ ಮಾತೆ ಜ್ವಾಲಾ ಮಾಲಿನಿ ಮೆರವಣಿಗೆ ವಿಗ್ರಹಗಳಿವೆ.
ಸುಕನಾಸಿಯ ಪ್ರವೇಶ ದ್ವಾರದಲ್ಲಿ ಜಯ — ವಿಜಯ ಲಲಾಟದಲ್ಲಿ ಪದ್ಮಾವತಿ ಇದ್ದಾರೆ.
ಗರ್ಭಗುಡಿಯ ಪ್ರವೇಶ ದ್ವಾರದಲ್ಲಿ ಜಯ -ವಿಜಯ ರಿದ್ದು ಲಲಾಟದಲ್ಲಿ ಕಮಲಶಿಲ್ಪವಿದು ಬಾಗಿಲುವಾಡದಲ್ಲಿ ಕಳಸಗಳ ಸಮೇತ ಬಳ್ಳಿ ವರಸೆ ಚಿತ್ರಗಳಿವೆ. ಇದಕ್ಕೆ ತಾಮ್ರದ ಕವಚಗಳನ್ನ ಅಳವಡಿಸಲಾಗಿದೆ. ಗರ್ಭಗುಡಿಯಲ್ಲಿ ಮೂರುವರೆ ಅಡಿಯಿಂದ ನಾಲ್ಕು ಅಡಿಗಳ ಎತ್ತರದ ಖಡ್ಗಸನ ಭಂಗಿಯ ಶ್ರೀ ಸುಪಾರ್ಶ್ವನಾಥ ತೀರ್ಥಂಕರ ವಿರಾಜಮಾನ ರಾಗಿದ್ದಾರೆ.
ಬಸದಿಯ ಗರ್ಭಗುಡಿಯ ಮೂಲ ತೀರ್ಥಂಕರನ ಪಾದದ ಬಳಿ ಇರುವ ಶಾಸನದಲ್ಲಿ. “ಶ್ರೀ ರವಿಚಂದ್ರ ಭಟ್ಟಾರಕರು ಮಾಡಿಸಿದ ಪ್ರತಿಮೆ” ಎಂಬ ಶಾಸನವಿದೆ.
ದ್ವಾರ ವತಿ ಪುರವರಾಧಿಶ್ವರ ವಿಷ್ಣುವರ್ಧನ ಮಹಾ ಸಾಮoತನು ಮುರುಗೆರೆ ನಾಡಪ್ರಭುವಾದ ಬಾಚಿ ಯು ತನ್ನ ಮಾತ- ಪಿತೃಗಳು ಹಾಗೂ ಕುಟುಂಬದ ವರ್ಗದವರಿಗೆ ಸ್ವರ್ಗಪ್ರಾಪ್ತಿಯಾಗಲೆಂದು ಅನೇಕ ದೇವಾಲಯಗಳು, ಬಸದಿಗಳನ್ನು ನಿರ್ಮಿಸಿದ್ದು ಈ ಪೈಕಿ ಮಿಡಿಗೇಶಿಯ ಶ್ರೀ ಸುಪಾರ್ಶ್ವನಾಥ ಜಿನ ಮಂದಿರವು ಒಂದಾಗಿದೆ. ಈ ಜೈನ ಬಸದಿಯನ್ನು ಕ್ರಿಸ್ತ.ಶಕ. 1151 ರಲ್ಲಿ ನಿರ್ಮಿಸಿದ್ದಾನೆ ಅಲ್ಲದೇ ಅನೇಕ ದಾನ ಧರ್ಮಗಳನ್ನು ಮಾಡಿದ್ದಾನೆ.
ಈ ಜೈನಬಸದಿ ಹೊಯ್ಸಳ ವಾಸ್ತು ಶೈಲಿಯಲ್ಲಿದ್ದು ಸರಳ ವಾಸ್ತುಶಿಲ್ಪದಿಂದ ಕೂಡಿದೆ, ಬಸದಿಯ ಮುಂಬಾಗ ಕ್ಷೇತ್ರ ಪಾಲ, ಬ್ರಹ್ಮ ದೇವರಿಗೆ ಕುದುರೆ ವಾಹನ ವಾಗಿದ್ದು, ಈ ಬಸದಿಯಲ್ಲಿ ಬ್ರಹ್ಮದೇವರಿಗೆ ಹಂಸ ವಾಹನ ವಾಗಿರುವುದು ವಿಶೇಷವಾಗಿದೆ.
ಬಸದಿಯ ಮುಖ ಮಂಟಪದ ಪ್ರಭಾವಳಿಯಲ್ಲಿ ಪದ್ಮಾಸನ ಮೂರ್ತಿಯ ತೀರ್ಥಂಕರ ಎರಡು ಪಾರ್ಶ್ವಗಳಲ್ಲಿ ಜಯ -ವಿಜಯ ನಂತರ ಪದ್ಮಾವತಿ, ಜ್ವಾಲಾ ಮಾಲಿನಿ ವಿಗ್ರಹಗಳಿದ್ದು ,ಗರ್ಭಗುಡಿ ಗೋಪುರದ ನಾಲ್ಕು ದಿಕ್ಕುಗಳಲ್ಲಿ ಎರಡು ಹಂತಗಳಲ್ಲಿ ಪದ್ಮಾಸನ ಮೂರ್ತಿಯ ತೀರ್ಥಂಕರ ರುಗಳನ್ನು ನಿರ್ಮಿಸಲಾಗಿದೆ. ಬಸದಿಯ ಬಲಭಾಗದಲ್ಲಿ ನಾಗಬನವಿದೆ.
ಶ್ರೀ ಸುಪಾರ್ಶ್ವನಾಥ ತೀರ್ಥಂಕರ ಹಾಗೂ ಬ್ರಹ್ಮ ಯಕ್ಷರ ಜಿನ ಮಂದಿರ ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನ ಗದ್ದೆ ಬಸ್ತಿ ಮಠದ ಆಡಳಿತ ವ್ಯಾಪ್ತಿಗೆ ಸೇರಿದೆ.
ಬಸದಿ ಎದುರು 27 ಅಡಿಗಳ ಎತ್ತರದ ಮಾನಸ್ತಂಭ ವಿದ್ದು, ಇದನ್ನ ಸಾರ್ವಜನಿಕರ ಸಹಕಾರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲೂಕಿನ , ಕೊಯಿರಾ ಬಂಡೆಯಿಂದ ನಿರ್ಮಿಸಲಾಗಿದೆ. ಮಾನಸ್ತಂಬದ ಮೇಲೆ ಚತುರ್ಮುಖ ಬಿಂಬಗಳು ಕಾಯೋತ್ಸರ್ಗ ಬಂಗಿಯಲ್ಲಿವೇ.
ಬಸದಿ ಮುಖ್ಯ ಪ್ರವೇಶ ದ್ವಾರ ಮಂಟಪವನ್ನು ಹುಲಿ ಮತ್ತು ಹಸು ಒಂದೇ ಕೊಳದಲ್ಲಿ ನೀರು ಕುಡಿಯುತ್ತಿರುವ ಚಿತ್ರವನ್ನು ಚಿತ್ರಿಸಲಾಗಿದ್ದು , ಎರಡು ಭಾಗಗಳಲ್ಲಿ ಜಲಾಂದ್ರಗಳಿದ್ದು ,ಇದೊಂದು ಪುರಾತನ ಕೋಟೆಯ ಪ್ರವೇಶ ದ್ವಾರದಂತಿದೆ .ಇದನ್ನ ತುಮಕೂರಿನ ನವರತ್ನ -ಎನ್. ಬಿ .ಶ್ರೇಯಾoಸ ಕುಮಾರ. ಅವರ ಪುತ್ರ ಜಿ.ಎಸ್ .ನಾಗೇಂದ್ರ ಕುಮಾರ್ -ಸುಷ್ಮಾ ದಂಪತಿಗಳು ತಮ್ಮ ಅಜ್ಜ ದಿವಂಗತ ಎಂ .ಸಿ .ಬೊಮ್ಮಣ್ಣಯ್ಯ ಹಾಗೂ ಅಜ್ಜಿ ಅಕ್ಕಯಮ್ಮ ಸ್ಮರಣಾರ್ಥ 30 ಮೇ 2010 ರಲ್ಲಿ ನಿರ್ಮಿಸಿ ಕೊಟ್ಟಿದ್ದಾರೆ. ಅಲ್ಲದೇ ಈ ಹಿಂದೆ ಇಲ್ಲಿನ ಜಿನ ಶಾಸನದ ಪ್ರಕಾರ ಸಾಹಿತಿ ಜಿ. ಬ್ರಹ್ಮಪ್ಪ 12 ಸಹಸ್ತ್ರ ರೂಗಳ ಅನ್ನದಾನ ಮಾಡಿದ್ದಾರೆಂದು ತಿಳಿದು ಬಂದಿದೆ.
ಈ ಬಸದಿಯ ಜೀರ್ಣೋದಾರ ಹಾಗೂ ಪಂಚಕಲ್ಯಾಣಗಳು 28 ಮೇ 2010 ರಿಂದ 30 ಮೇ 2010ರವರೆಗೆ ನಡೆದಿದೆ.
ಈ ಐತಿಹಾಸಿಕ ತಾಣ ರಾಜಧಾನಿ ಬೆಂಗಳೂರಿನಿಂದ 132 ಕಿ.ಮೀ, ಜಿಲ್ಲಾ ಕೇಂದ್ರ ತುಮಕೂರಿನಿಂದ 66 ಕಿ.ಮೀ ,ತಾಲೂಕು ಕೇಂದ್ರ ಮಧುಗಿರಿಯಿಂದ 22 ಕಿ ಮೀ, ಪಾವಗಡ ದಿಂದ 34 ಕಿ.ಮೀ, ತಮಿಳುನಾಡು ಗಡಿ -ಆಂಧ್ರದ ಗಡಿ ರಾಜ್ಯ ಹೆದ್ದಾರಿ- 3 ಈ ಹೋಬಳಿ ಕೇಂದ್ರ ಮಿಡಿಗೇಸಿಯ ಮೂಲಕವೇ ಹಾದು ಹೋಗಲಿದೆ. ಸದಾ ಕೆ.ಎಸ್ .ಆರ್ .ಟಿ.ಸಿ ಹಾಗೂ ಖಾಸಗಿ ಬಸ್ ಗಳ ಸೌಕರ್ಯವಿದೆ.
ಈ ಐತಿಹಾಸಿಕ ಶ್ರೀ ಸುಪಾರ್ಶ್ವನಾಥ ತೀರ್ಥಂಕರ ಬಸದಿಗೆ ಭೇಟಿ ನೀಡಿದಾಗ ಸಮೀಪದ ಬಸದಿಗಳಾದ ಗೊಲ್ಲರಹಳ್ಳಿ, ಪಾವಗಡ ,ನಿಡಗಲ್, ಅಗಳಿ, ಐ.ಡಿ.ಹಳ್ಳಿ ,ರತ್ನಗಿರಿ ,ಮಧುಗಿರಿ ,ಅಮರಾಪುರ, ಪೆನಗೊಂಡ, ಶ್ರಾವoಡನ ಹಳ್ಳಿ , ಅರಸಾಪುರ, ಗೌರಿಬಿದನೂರು, ಕುರುಡಿ ಇನ್ನಿತರ ಬಸದಿಗಳನ್ನು ಸಂದರ್ಶಿಸಬಹುದು. 2024 ರ ಡಿಸೆಂಬರ್ 8 ರಂದು ಭಾನುವಾರ ವಾರ್ಷಿಕ ಪೂಜೆ ನಡೆಯಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx