ಮಧುಗಿರಿ: ಮುದ್ದೇನೇರಳೆಕೆರೆ ಸರ್ಕಾರಿ ಶಾಲೆಯಲ್ಲಿ ‘ಇಂಗ್ಲಿಷ್ ಫೆಸ್ಟ್’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲಾ ಮಕ್ಕಳಿಗೆ ಇಂಗ್ಲಿಷ್ ಭಾಷಾ ಜ್ಞಾನಾಭಿವೃದ್ಧಿಗೆ ಹಾಗೂ ಸಂವಹನಕ್ಕಾಗಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಿದ್ದ ಶಾಲೆಯ ಇಂಗ್ಲಿಷ್ ಭಾಷಾ ಶಿಕ್ಷಕರಾದ ಮಂಜುನಾಥ್, ಇಂಗ್ಲೀಷ್ ಭಾಷಾಜ್ಞಾನ ಮಹಾಸಾಗರವಿದ್ದಂತೆ ಅದರ ಆಳ ತಿಳಿಯಲು, ಭಾಷಾ ಕೌಶಲ್ಯ ಹೆಚ್ಚಿಸಿಕೊಳ್ಳಲು ಸತತವಾಗಿ ಪರಿಶ್ರಮ ಪಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇಂಗ್ಲೀಷ್ ಭಾಷಾ ಉಪನ್ಯಾಸಕರಾದ ಮಾರುತಿ ಬಿ.ಎಲ್. ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಗು ಹುಟ್ಟಿದ ತಕ್ಷಣ ನಡೆಯುವುದಿಲ್ಲ, ಅದು ಸತತ ಪ್ರಯತ್ನ ಪಟ್ಟು ನಡೆಯಲು ಪ್ರಾರಂಭಿಸುತ್ತದೆ. ಹಾಗೆಯೇ ಶಾಲೆಯಲ್ಲಿ ಮಕ್ಕಳು ಸಹ ಇಂಗ್ಲಿಷ್ ಭಾಷೆ ಸಂವಹನ ನಿರಂತರ ಪ್ರಯತ್ನದಿಂದ ಸಾಧ್ಯವಾಗುತ್ತದೆ. ಪ್ರತಿದಿನ ಶಾಲೆಗಳಲ್ಲಿ ಅಭ್ಯಾಸ ಮಾಡಬೇಕು ಹಾಗೂ ಇತ್ತೀಚಿನ ದಿನಗಳಲ್ಲಿ ಇಂಗ್ಲೀಷ್ ಭಾಷೆ ಮತ್ತು ಕಂಪ್ಯೂಟರ್ ಜ್ಞಾನ ಎಷ್ಟು ಪ್ರಾಮುಖ್ಯವಾಗಿ ಬೇಕು, ಹೊರ ರಾಜ್ಯಗಳಲ್ಲಿ ಉದ್ಯೋಗ ಪಡೆಯಲು ಜೀವನ ನಡೆಸಲು ಇಂಗ್ಲೀಷ್ ಭಾಷೆ ಅತ್ಯಗತ್ಯ ಎಂದು ನುಡಿದರು.
ಮತ್ತೋರ್ವ ಅತಿಥಿಗಳಾಗಿ ಆಗಮಿಸಿದ್ದ ಸಂಚಲನ ತಂಡದ ತಾಲೂಕು ಸಂಯೋಜಕರಾದ ಸುಚೇಂದ್ರ ಮಾತನಾಡಿ, ಶಾಲೆಯಲ್ಲಿ ಮಕ್ಕಳು ಆದಷ್ಟು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿ, ಪೋಷಕರು ಸಹ ಮಕ್ಕಳಿಗೆ ಇಂಗ್ಲಿಷ್ ನಲ್ಲಿ ಮಾತನಾಡಲು ಪ್ರೇರೇಪಿಸಬೇಕು ಮತ್ತು ಪ್ರೋತ್ಸಾಹಿಸಬೇಕು ಆಗ ಮಾತ್ರ ಭಾಷಾ ಕೌಶಲ್ಯ ಹೆಚ್ಚುತ್ತದೆ ಎಂದರು.
ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕರಾದ ಅಶ್ವತಪ್ಪ, ಇಂಗ್ಲಿಷ್ ಭಾಷೆ ಎನ್ನುವುದು ಬ್ರಿಟಿಷರು ನಮ್ಮ ದೇಶಕ್ಕೆ ಬಿಟ್ಟುಹೋದ ಪರಂಪರೆ ಇಂದು ಅದು ತುಂಬಾ ಪ್ರಭಾವ ಬೀರಿದೆ. ಉನ್ನತವಾದ ಹುದ್ದೆಯನ್ನು ಅಲಂಕರಿಸಲು ಅನಿವಾರ್ಯವಾಗಿದೆ ಎಂದು ನುಡಿದರು.
ನಾವು ಎಲ್ಲೇ ಹೋದರು ಮಾತನಾಡುವ ಮೊದಲು ಜೈ ಭೀಮ್ ಎನ್ನುತ್ತೇವೆ, ಇದರ ಅರ್ಥ ಜೈ ಎಂದರೆ ಜ್ಞಾನ, ಭೀಮ್ ಎಂದರೆ ಹೊರ ಹಾಕು ಎಂಬುದಾಗಿದೆ ಡಾ.ಬಿ.ಆರ್ ಅಂಬೇಡ್ಕರ್ ರವರು ಸಹ ನಮ್ಮಂತೆ ಬಡ ಕುಟುಂಬದಿಂದ ಬಂದು ಎಲ್ಲಾ ಭಾಷೆಗಳನ್ನು ಕಲಿತು ಮಹಾಜ್ಞಾನಿಯಾದರು ಎಂದು ಗ್ರಾಮದ ಹಾಲಿನ ಡೈರಿ ಕಾರ್ಯದರ್ಶಿ ರಾಜಣ್ಣ ಎಂ.ಎನ್. ಮಕ್ಕಳಿಗೆ ಇಂಗ್ಲಿಷ್ ಕಲಿಯಲು ಸ್ಪೂರ್ತಿ ತುಂಬಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ನಾರಾಯಣಮೂರ್ತಿರವರು ಮಾತೃಭಾಷೆ ಜೊತೆಗೆ ಇಂಗ್ಲಿಷ್ ಭಾಷೆಯನ್ನು ಕಲಿಯಲು ಸೂಚಿಸಿದರು . ಮುಖ್ಯ ಶಿಕ್ಷಕಿ ನರಸಮ್ಮ ಮಕ್ಕಳಿಗೆ ಮನೆಯಲ್ಲೂ ಶಾಲೆಯಲ್ಲೂ ಹೆಚ್ಚು ಹೆಚ್ಚು ಇಂಗ್ಲೀಷ್ ಪದಗಳ ಬಳಕೆ ಮಾಡುವುದರಿಂದ ಭಾಷಾ ಸಂವಹನ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಗ್ರಾಮದ ‘ಶ್ರೀ ಲಕ್ಷ್ಮಿ ಲಕ್ಷ್ಮಮ್ಮ ನರಸಿಂಹಯ್ಯ ಚಾರಿಟಬಲ್ ಟ್ರಸ್ಟ್’ ನ ಅಧ್ಯಕ್ಷ ಹಾಗೂ ದಿವಂಗತ ಎನ್. ಗಂಗಪ್ಪನವರ ಸಹೋದರ ಶ್ರೀಲಕ್ಷ್ಮಿ ನರಸಪ್ಪ ಕಾರ್ಯಕ್ರಮದಲ್ಲಿ ಕುಳಿತುಕೊಳ್ಳಲು, ಮಕ್ಕಳಿಗೆ ನೆರಳಿಗೋಸ್ಕರ ಪೆಂಡಾಲ್ ಮತ್ತು ಚೇರ್ ಗಳ ವ್ಯವಸ್ಥೆಯನ್ನು ಮಾಡಿಸಿದ್ದರು.
ಇಂಗ್ಲೀಷ್ ಭಾಷಾ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ನೀಡಲು ದಾಸಪ್ಪನ ಪಾಳ್ಯ ಗ್ರಾಮದ ಶ್ರೀ ದೇವದಾಸ್ ರವರು ಕೊಡುಗೆ ನೀಡಿದ್ದರು.
ಶಾಲಾ ಶಿಕ್ಷಕರಾದ ರೇಖಾ ,ಮಮ್ತಾಜ್ ಬೇಗಂ, ನಾಗಶ್ರೀ ಹಾಗೂ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಲಾವಣ್ಯ ಮತ್ತು ಸದಸ್ಯರು ಪೋಷಕರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶಾಲಾ ಮಕ್ಕಳೇ ನಿರೂಪಿಸಿ ಸ್ವಾಗತಿಸಿ ವಂದಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4