ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ರ ಸಾಲಿನ ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾದರು. ಸಂಪ್ರದಾಯದ ಪ್ರಕಾರ, ಹಣಕಾಸು ಸಚಿವೆ ಸಂಸತ್‍ಗೆ ತೆರಳುವ ಮುನ್ನ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಖಾತೆ ರಾಜ್ಯ ಸಚಿವರಾದ ಡಾ.ಭಾಗವತ್ ಕಿಶನ್‍ರಾವ್ ಕರಾಡ್, ಪಂಕಜ್‍ಚೌಧರಿ ಮತ್ತು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ 2022-23ರ ಕೇಂದ್ರ ಬಜೆಟ್ ಮಂಡನೆಗೆ ಮೊದಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು ಎಂದು ರಾಷ್ಟ್ರಪತಿ ಭವನ ಟ್ವೀಟ್ ಮಾಡಿದೆ.ತರುವಾಯ ಬಜೆಟ್‍ನ ಅನುಮೋದನೆಗಾಗಿ ಕೇಂದ್ರ ಸಚಿವ ಸಂಪುಟದ ಸಭೆ ನಡೆಯಿತು.
ಬಜೆಟ್‍ನ ವಾಸ್ತವಿಕ ಮಂಡನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸಚಿವ ಸಂಪುಟ 2022-23ರ ಹಣಕಾಸು ವರ್ಷದ ಬಜೆಟ್‍ಗೆ ಅನುಮೋದನೆ ನೀಡುತ್ತದೆ.ಸಾಂಪ್ರದಾಯಿಕವಾಗಿ ಹಣಕಾಸು ಸಚಿವರು ಆಗಮಿಸುವ ಮುನ್ನ ಬಜೆಟ್‍ನ ಪ್ರತಿಗಳನ್ನು ಸಂಸತ್ ಸಮುಚ್ಚಯಕ್ಕೆ ತರಲಾಗುತ್ತದೆ. ಈ ವರ್ಷ ಕೋವಿಡ್-19ರ ಶಿಷ್ಟಾಚಾರದ ಹಿನ್ನೆಲೆಯಲ್ಲಿ ಯಾವುದೇ ದಾಖಲೆಯನ್ನು ಮುದ್ರಿಸಲಾಗಿಲ್ಲ.ಬದಲಾಗಿ, ಸರ್ಕಾರದ ವೆಬ್‍ಸೈಟ್‍ನಲ್ಲಿ ಬಜೆಟ್ ಪ್ರತಿಗಳನ್ನು ಅಪ್ ಲೋಡ್ ಮಾಡುವ ಮೂಲಕ ವಿದ್ಯುನ್ಮಾನ ರೀತಿ ಲಭ್ಯವಾಗಿಸಲಾಗುತ್ತದೆ. ಇದೇ ಕಾರಣಕ್ಕೆ ಒಂದು ವಿಶೇಷ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗುತ್ತದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB