ಬೆಂಗಳೂರು: ಕಸ ವಿಲೇವಾರಿ ಬೆಂಗಳೂರಿನಲ್ಲಿ ದೊಡ್ಡ ಮಾಫಿಯಾ ಆಗಿದೆ, ಶಾಸಕರು ನನಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಅವರು ಕಸ ವಿಲೇವಾರಿಗೆ ತಡೆಯಾಗಿರುವ ಬಗ್ಗೆ ಸದನದ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಡಿ.ಕೆ.ಶಿವಕುಮಾರ್ , ಇದೊಂದು ದೊಡ್ಡ ಮಾಫಿಯಾ. ಇದಕ್ಕೂ ಮೊದಲು, 89 ಗುಂಪು ಮಾಡಿ ಟೆಂಡರ್ ಕರೆದಿದ್ದರು. ಈಗ ಅವರು ಒಟ್ಟಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯ ಕೂಡ ಈ ವಿಚಾರವಾಗಿ ಏನು ಮಾಡಬೇಕೆಂಬ ತೀರ್ಪು ನೀಡಿಲ್ಲ. ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಯಾವುದೇ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ ಎಂದರು.
ನಾವು ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ 50 ಕಿ.ಮೀ ದೂರದ ಹೊರಗೆ ಕಸ ವಿಲೇವಾರಿಗೆ ಪ್ರಯತ್ನ ಮಾಡುತ್ತಿದ್ದವೆ. ಆದರೆ, ಬೆಂಗಳೂರಿನ ಕೆಲವು ಶಾಸಕರು ನಮಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ನಾನು ಅವರ ಹೆಸರು ಹೇಳಲು ಬಯಸುವುದಿಲ್ಲ. ನಾನು ಸತ್ಯಾಂಶವನ್ನೇ ಹೇಳುತ್ತಿದ್ದು, ಎಲ್ಲಾ ಪಕ್ಷದವರು ಇದ್ದಾರೆ. ಅಭಿವೃದ್ಧಿಗಾಗಿ ಅವರ ಕ್ಷೇತ್ರಕ್ಕೆ 800 ಕೋಟಿ ನೀಡಬೇಕೆಂದು ಕೇಳುತ್ತಿದ್ದಾರೆ ಎಂದರು.
ಕಳೆದ ಮೂರು ದಿನಗಳಿಂದ ಮಹದೇವಪುರದಲ್ಲಿ ಕಸದ ಲಾರಿಗಳನ್ನು ನಿಲ್ಲಿಸಲಾಗಿದೆ. ಇದು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದರು. ಇದೇ ವೇಳೆ ಸೋಮವಾರ ಈ ವಿಷಯದ ಬಗ್ಗೆ ವಿವರವಾದ ಉತ್ತರ ನೀಡುವುದಾಗಿಯೂ ಡಿಸಿಎಂ ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4