ತುಮಕೂರು: ಯುವಜನತೆ ಮಾದಕ ವಸ್ತುಗಳ ವ್ಯಸನದಿಂದ ದೂರವಿದ್ದು, ರಾಷ್ಟ್ರ ನಿರ್ಮಾಣಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದಾಗ ಮಾತ್ರ ಭವ್ಯ ಭಾರತದ ಕನಸು ನನಸಾಗುತ್ತದೆ. ಯುವ ಜನತೆ ಎಲ್ಲಾ ರೀತಿಯ ಮಾದಕ ವಸ್ತುಗಳ ವ್ಯಸನದಿಂದ ಮುಕ್ತರಾಗಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಸಿ.ಗೋಪಾಲ್ ತಿಳಿಸಿದರು.
ಅವರು ಭಾರತ ಸರ್ಕಾರದ ಕೇಂದ್ರ ಯುವ ಕಾರ್ಯಕ್ರಮ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ, ಚೇಳೂರು ಸಂಜೀವಿನಿ ಯುವಜನ ಸಂಘ, ಸುಫಿಯಾ ಕಾನೂನು ಮಹಾವಿದ್ಯಾಲಯ ಹಾಗೂ ಇನ್ಹರ್ ವೀಲ್‌ಕ್ಲಬ್ ಆಫ್ ತುಮಕೂರು ಸೆಂಟ್ರಲ್ ಇವರ ಸಹಯೋಗದಲ್ಲಿ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮಾದಕ ವ್ಯಸನ, ಮಾದಕ ವಸ್ತುಗಳ ದುಷ್ಪರಿಣಾಮ ಹಾಗೂ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮತ್ತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದುಳಿದ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಯುವಜನರು ಮಾದಕ ವ್ಯಸನಕ್ಕೆ ಬಲಿಯಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ದುರ್ದೈವದ ಸಂಗತಿ ಎಂದರು.
ಸೈಬರ್ ಕ್ರೈಮ್ ಕುರಿತು ನಾಗರಿಕರು ಎಚ್ಚರಿಕೆಯಿಂದಿರಬೇಕು ಎಂದರು. ಇತ್ತೀಚೆಗೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಗಾಂಜಾ ಹಾಗೂ ಡ್ರಗ್ಸ್ ಸೇವನೆ ಮಾಡುತ್ತಿರುವುದು ಇಲಾಖೆ ಗಮನಕ್ಕೆ ಬಂದಿದ್ದು, ಅಂತವರ ಮೇಲೆ ಎನ್.ಡಿ.ಪಿ.ಎಸ್. ಆಕ್ಟ್ ಕಾಯಿದೆ ಅಡಿ ಸೂಕ್ತ ಕಾನೂನಿನ ಕ್ರಮ ಜರುಗಿಸಲಾಗುವುದು ಎಂದರು.
ಸೈಬರ್ ಪ್ರಕರಣಗಳನ್ನು ತಡೆಯುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಸೈಬರ್ ಕ್ರೈಂ ಠಾಣೆಗಳನ್ನು ಸ್ಥಾಪಿಸಲಾಗಿದೆ ಎಂದರು. ಯಾರೇ ಆಗಲೀ ತಮ್ಮ ಕೌಟುಂಬಿಕ ಜೀವನದ ವೈಯಕ್ತಿಕ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದರು.
ಮಾಜಿ ಶಾಸಕ ಡಾ.ಎಸ್.ಶಷೀ ಅಹಮ್ಮದ್ ಮಾತನಾಡಿ, ಯುವಕರು ಸಾಮಾಜಿಕ ಸ್ಥಾನಮಾನ ಪಡೆದುಕೊಳ್ಳುವ ವೇಗದಲ್ಲಿ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವುದು ಸರಿಯಲ್ಲ. ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದರು. ನಿವೃತ್ತ ಆರೋಗ್ಯ ನಿರೀಕ್ಷಕ ರುದ್ರಮೂರ್ತಿ ಮಾತನಾಡಿ, ತಂಬಾಕಿನಿಂದಾಗುವ ದುಷ್ಪರಿಣಾಮಗಳು ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಸರಿಗಮಪ ಖ್ಯಾತಿಯ ಕಿರುತೆರೆ ಕಲಾವಿದೆ ಹಾಗೂ ಸಿದ್ದಾಗಂಗಾ ವೈದ್ಯಕೀಯ ಹಾಗೂ ಸಂಶೋಧನಾ ಆಸ್ಪತ್ರೆಯ ವೈದ್ಯೆ ಡಾ.ಶ್ರಾವ್ಯ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ಮಾತನಾಡಿ ಗೀತಗಾಯನವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಸಂಯೋಜಕ ರಾಜಶೇಖರ್ ಕೆ. ಪ್ರಾಸ್ತಾವಿಕ ನುಡಿಗಳಾನ್ನಾಡಿದರು. ಪ್ರಾಂಶುಪಾಲ ಡಾ.ಎಸ್.ರಮೇಶ್ ಉಪಸ್ಥಿತರಿದ್ದು, ಇನ್ಹರ್ ವೀಲ್‌ಕ್ಲಬ್ ಆಫ್ ತುಮಕೂರು ಸೆಂಟ್ರಲ್ ಅಧ್ಯಕ್ಷೆ ಯಶೋಧರಾಜಣ್ಣ, ಕಾರ್ಯದರ್ಶಿ ಗಾಯತ್ರಿ ಪ್ರಸಾದ್, ಸೂಫಿಯಾ ಕಾನೂನು ಕಾಲೇಜಿನ ಪ್ರಾಧ್ಯಾಪಕ ಮಮತ, ಉಪಪ್ರಾಂಶುಪಾಲ ಓಬಯ್ಯ ಹಾಗೂ ಕಾನೂನು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಭಾಗವಹಿಸಿದ್ದರು. ನರಸಿಂಹಮೂರ್ತಿ ನಿರೂಪಿಸಿದರು. ಪ್ರೇಮ ಮತ್ತು ಸಂಗಡಿಗರು ಪ್ರಾರ್ಥಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW