ಶಿವಮೊಗ್ಗ: ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಸರಕಾರದ ವಿರುದ್ಧ ಬೃಹತ್ ಹೋರಾಟ ಮಾಡಲು ತೀರ್ಮಾನಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಜೂನ್ 13ರಂದು ಬೆಂಗಳೂರು ಮಹಾನಗರದ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಇದೆ. ಬಿಜೆಪಿ ಕಾರ್ಯಕರ್ತರು, ಘಟನೆಯಲ್ಲಿ ನೊಂದ ಕುಟುಂಬಗಳ ಸದಸ್ಯರು, ನೊಂದವರು ಬರಲಿದ್ದಾರೆ. ಸುಮಾರು 15- 20 ಸಾವಿರ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಲಿದ್ದಾರೆ ಎಂದು ವಿವರಿಸಿದರು.
ಆರ್ ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತ, 11 ಸಾವಿನ ಸಂಬಂಧ ದುರ್ಘಟನೆಯಲ್ಲಿ ಆರೋಪಿ ನಂಬರ್ 1 ಆರ್ ಸಿಬಿ ಅಲ್ಲ. ಆರ್ಸಿಬಿ ಕೆಎಸಿಎ, ಡಿಎನ್ಎ ಅವರು ಕೂಡ ಆರೋಪಿಗಳೇ ಆಗಿದ್ದಾರೆ. ಮುಖ್ಯಮಂತ್ರಿಗಳೇ ಆರೋಪಿ ನಂಬರ್ 1, ಉಪ ಮುಖ್ಯಮಂತ್ರಿಗಳು 2ನೇ ಆರೋಪಿ, ಕೈಕಟ್ಟಿ ಕುಳಿತಿದ್ದ ಗೃಹ ಸಚಿವ ಪರಮೇಶ್ವರ್ ಅವರು ಆರೋಪಿ ನಂಬರ್ 3; ನಂತರದ ಹೊಣೆಗಾರರು ಆರ್ಸಿಬಿ, ಕೆಎಸಿಎ, ಡಿಎನ್ ಎ ಎಂದು ತಿಳಿಸಿದರು.
ಕರ್ತವ್ಯನಿರತ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಈ ಪ್ರಕರಣದ ತನಿಖೆ ನಡೆಸಬೇಕೆಂದು ಬಿಜೆಪಿ ಆಗ್ರಹಿಸಿತ್ತು. ಸಿಐಡಿ ತನಿಖೆಗೆ ಕೊಟ್ಟರು. ಮತ್ತೊಂದು ಕಡೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆಗೆ ಆದೇಶಿಸಿದ್ದಾರೆ. ಅವರಿಗೆ ಬೇಕಾದವರನ್ನು ನೇಮಿಸಿ ರಾಜ್ಯ ಸರಕಾರಕ್ಕೆ ಕ್ಲೀನ್ ಚಿಟ್ ಕೊಟ್ಟು ಅಧಿಕಾರಿಗಳ ಮೇಲೆ ಗೂಬೆ ಕೂರಿಸಿ ಹೊಣೆಯಿಂದ ತಪ್ಪಿಸಿಕೊಳ್ಳಲೆಂದೇ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW