ಬೆಂಗಳೂರು: ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಬ್ಲಾಕ್ ಬಸ್ಟರ್ ಸಿನಿಮಾ ‘ಪ್ರೇಮದ ಊರಲಿ’ ವೀಕ್ಷಿಸಲು ತೆರಳಿದ್ದ ಕುಟುಂಬವೊಂದಕ್ಕೆ ಕಳ್ಳನೊಬ್ಬ ಶಾಕ್ ನೀಡಿದ್ದಾನೆ. ಆದರೆ ಮಾಲೀಕರ ಸಮಯಪ್ರಜ್ಞೆಯಿಂದ ಕಳ್ಳ ಅಂತಿಮವಾಗಿ ಸಿಕ್ಕಿಬಿದ್ದು ಪೊಲೀಸರತಿಥಿಯಾಗಿದ್ದಾನೆ.
ದೇವನಹಳ್ಳಿ ತಾಲ್ಲೂಕಿನ ಗೊಬ್ಬರಗುಂಟೆ ಗ್ರಾಮದಲ್ಲಿ ಈ ರೋಚಕ ಘಟನೆ ನಡೆದಿದೆ.
ಮನೆ ಮಾಲೀಕ ಕೃಷ್ಣಪ್ಪ ಹಾಗೂ ಅವರ ಕುಟುಂಬಸ್ಥರು ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಪ್ರೇಮದ ಊರಲಿ’ ಸಿನಿಮಾ ನೋಡಲು ತೆರಳಿದ್ದರು. ಮನೆಗೆ ಬೀಗ ಹಾಕಿ ಹೋಗಿದ್ದರಿಂದ, ಇದನ್ನು ಬಂಡವಾಳ ಮಾಡಿಕೊಂಡ ಖದೀಮರೊಬ್ಬರು ಮನೆಗೆ ನುಗ್ಗಿ ಸುಮಾರು 130 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಿದ್ದರು. ಆದರೆ, ಕಳ್ಳ ಚಿನ್ನ ದೋಚಿ ಪರಾರಿಯಾಗುವಷ್ಟರಲ್ಲಿಯೇ ಕುಟುಂಬಸ್ಥರು ಮನೆಗೆ ವಾಪಸ್ ಆಗಿದ್ದಾರೆ.
ಸಿನಿಮಾ ಮುಗಿಸಿ ಮನೆಗೆ ವಾಪಸ್ ಬಂದಾಗ ಕುಟುಂಬದವರಿಗೆ ದೊಡ್ಡ ಅನುಮಾನ ಮೂಡಿದೆ. ತಾವು ಮನೆಯಿಂದ ಹೊರಡುವಾಗ ಹೊರಗಡೆಯಿಂದ ಬೀಗ ಹಾಕಲಾಗಿತ್ತು, ಆದರೆ ವಾಪಸ್ ಬಂದಾಗ ಒಳಗಿನಿಂದ ಲಾಕ್ ಆಗಿರುವುದನ್ನು ಗಮನಿಸಿ ಅವರಿಗೆ ಅನುಮಾನ ಹೆಚ್ಚಾಯಿತು. ಕೂಡಲೇ ಎಚ್ಚೆತ್ತುಕೊಂಡ ಕುಟುಂಬಸ್ಥರು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ, ಅನ್ಯ ವ್ಯಕ್ತಿಯೊಬ್ಬ ಮನೆಗೆ ನುಗ್ಗಿರುವುದು ಹಾಗೂ ಹೊರಗೆ ಬಾರದಿರುವುದು ಬೆಳಕಿಗೆ ಬಂದಿದೆ.
ಕೂಡಲೇ ಅಲರ್ಟ್ ಆದ ಮನೆಯವರು ಮತ್ತು ಸ್ಥಳೀಯರು ಮನೆಯನ್ನು ಸುತ್ತುವರೆದು ಶೋಧ ನಡೆಸಿದ್ದಾರೆ. ಈ ವೇಳೆ ಕೋಣೆಯೊಂದರ ಮಂಚದ ಕೆಳಗೆ ಕಳ್ಳ ಅವಿತಿರುವುದು ಪತ್ತೆಯಾಗಿದೆ. ಕೂಡಲೇ ಆತನನ್ನು ಸುತ್ತುವರೆದು ಸೆರೆಹಿಡಿದು, ದೇವನಹಳ್ಳಿ ಭಾಗದ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೇರಳದ ಚಿತ್ತಿಲಪಲ್ಲಿ ಮೂಲದ ಅಜಯ್ ಎಂದು ಗುರುತಿಸಲಾಗಿದೆ. ಈತ ಯಲಹಂಕ ಸಮೀಪದ ಅಪಾರ್ಟ್ಮೆಂಟ್ನಲ್ಲಿ ಸ್ನೇಹಿತರೊಂದಿಗೆ ವಾಸವಿದ್ದನು ಹಾಗೂ ಓಲಾ, ಉಬರ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕಳ್ಳತನಕ್ಕೂ ಮುನ್ನ ಈ ಖದೀಮ ಕಳೆದ 2-3 ದಿನಗಳಿಂದ ಮನೆಯವರ ಚಲನವಲನಗಳ ಮೇಲೆ ಕಣ್ಣಿಟ್ಟು ನಿಗಾ ಇಟ್ಟಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಪ್ರಸ್ತುತ ವಿಜಯಪುರ ಪೊಲೀಸರು ಆರೋಪಿ ಅಜಯ್ ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
