ತಿಪಟೂರು: ತಾಲ್ಲೂಕಿನ ಪುರಾಣ ಪ್ರಸಿದ್ದ ಐತಿಹಾಸಿಕ ಪುಣ್ಯಕ್ಷೇತ್ರ ಗಂಗನಘಟ್ಟದ ಶ್ರೀ ವಡ್ಡುಗಲ್ಲು ರಂಗನಾಥಸ್ವಾಮಿ ಯವರ ಬ್ರಹ್ಮ ರಥೋತ್ಸವವು ಜುಲೈ 7ರಂದು ಸಂಜೆ ಜರುಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾತ್ರಾ ಮಹೋತ್ಸವು ಜುಲೈ 5 ರಂದು ಪ್ರಾರಂಭವಾಗಿ ಸಂಜೆ 6 ಗಂಟೆಗೆ ಭಗವದನುಜ್ಙೆ, ವಿಶ್ವೇಕ್ಸೇನಾರಾಧನೆ, ವಾಸುದೇವ ಪುಣ್ಯಾಹ ವಾಚನ, ರಕ್ಷಾ ಬಂಧನ, ಮೃತ್‌ಸಂಗ್ರಹಣೆ, ಅಂಕುರಾರ್ಪಣೆ, ಗರುಡಧ್ವಜ ಪ್ರತಿಷ್ಠೆ. ಜುಲೈ 6 ರಂದು ಬೆಳಗ್ಗೆ ಧ್ವಜಾರೋಹಣ, ಚತುಸ್ಥಾನಾರ್ಚನೆ, ಅಭಿಷೇಕ, ನಂದಾದೀಪ ಸ್ಥಾಪನೆ, ಅಗ್ನಿ ಪ್ರತಿಷ್ಠೆ, ಮಹಾಮಂಗಳಾರತಿ, ಪಂಚಾಮೃತ, ತೀರ್ಥ ಪ್ರಸಾದ ವಿನಿಯೋಗ, ಸಂಜೆ 5 ಗಂಟೆಗೆ ರಥಕ್ಕೆ ಕಲಶ ಸ್ಥಾಪನೆ, ಚತುಸ್ಥಾನಾರ್ಚನೆ, ಗಜೇಂದ್ರ ಮೋಕ್ಷ, ಶ್ರೀಲಕ್ಷ್ಮೀ ಕಲ್ಯಾಣೋತ್ಸವ. ಜುಲೈ 7ರಂದು ಬೆಳಗ್ಗೆ ಚತುಸ್ಥಾನಾರ್ಚನೆ, ಸಹಸ್ರನಾಮಾರ್ಚನೆ, ಸಂಜೆ 4:30ಕ್ಕೆ ಬ್ರಹ್ಮ ರಥೋತ್ಸವ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ. ನಂತರ ಸಂಜೆ 7 ಗಂಟೆಗೆ ಶಯನೋತ್ಸವ ಮತ್ತು ಜುಲೈ 8 ರ ಬೆಳಗ್ಗೆ ಬೆಳಗ್ಗೆ ಚತುಸ್ಥಾನಾರ್ಚನೆ, ಧ್ವಜ ಅವರೋಹಣ, ಮಹಾಪೂರ್ಣಾಹುತಿ, ಅಶ್ವವಾಹನೋತ್ಸವಗಳು ಜರುಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಗಜೇಂದ್ರ ಮೋಕ್ಷದ ವಿಶೇಷತೆ: ಗಜೇಂದ್ರ ಮೋಕ್ಷ ಎನ್ನುವುದು ಹಿಂದೂ ಧರ್ಮದಲ್ಲಿನ ಒಂದು ಪವಿತ್ರವಾದ ಪಠ್ಯವಾದ ಭಾಗವತ ಪುರಾಣದ 8ನೇ ಸ್ಕಂದದಲ್ಲಿರುವ ಒಂದು ಪೌರಾಣಿಕ ಕಥೆ. ಆಪತ್ಕಾಲದಲ್ಲಿ ಭಗವಂತನ ನಾಮಸ್ಮರಣೆ ಮಾಡಿದರೆ ಬೆಟ್ಟದಂತೆ ಬಂದ ಕಷ್ಟಗಳು ಮಂಜಿನಂತೆ ಕರಗುವುವು ಎಂಬುದಕ್ಕೆ ಇದೊಂದು ದೃಷ್ಟಾಂತ. ಬಹಳ ಹಿಂದೆ ಪಾಂಡ್ಯದೇಶದ ರಾಜ ಇಂದ್ರದ್ಯುಮ್ನ ಮಹಾವಿಷ್ಣುಭಕ್ತ. ಒಮ್ಮೆ ತ್ರಿಕೂಟಾಚಲದ ಕಣಿವೆಯಲ್ಲಿ ಮೌನ ತಪಸ್ಸಿನಲ್ಲಿದ್ದಾಗ ತನ್ನಲ್ಲಿಗೆ ಬಂದ ಅಗಸ್ತ್ಯ ಮಹರ್ಷಿಯನ್ನು ಗೌರವಿಸದ ಕಾರಣ ಋಷಿ ಶಾಪಕ್ಕೆ ಗುರಿಯಾಗಿ ಗಜ ಜನ್ಮ ಪಡೆದ. ಹೀಗೆ ಇಂದ್ರದ್ಯುಮ್ನ ಆನೆಯಾಗಿ ಕೊಳದಲ್ಲಿ ನೀರು ಕುಡಿಯುತ್ತಿದ್ದಾಗ ಮೊಸಳೆಯೊಂದು ಬಂದು ಆತನ ಕಾಲು ಹಿಡಿಯಿತು. ಏನು ಮಾಡಿದರೂ ತನ್ನನ್ನು ಮೊಸಳೆ ಬಿಡದೆ ಇದ್ದುದನ್ನು ಕಂಡು ಇಂದ್ರದ್ಯುಮ್ನನಿಗೆ ಪೂರ್ವಜನ್ಮದ ಸ್ಮರಣೆಯುಂಟಾಗಿ ಬಿಡುಗಡೆಗಾಗಿ ವಿಷ್ಣುವನ್ನು ಪ್ರಾರ್ಥಿಸಿದ. ಆಗ ವಿಷ್ಣು ಪ್ರತ್ಯಕ್ಷನಾಗಿ ಮೊಸಳೆಯನ್ನು ಕೊಂದು ಇಂದ್ರದ್ಯುಮ್ನನನ್ನು ಶಾಪಮುಕ್ತನಾಗುವಂತೆ ಮಾಡಿದ. ಈ ಕಥೆಯನ್ನು ಹೇಳಿದವರಿಗೆ, ಕೇಳಿದವರಿಗೆ ದುರ್ಬುದ್ದಿ, ದುಸ್ವಪ್ನ ಕಳೆದು ಸುಖ ಸಮೃದ್ದಿ ಲಭಿಸುವುದು ಇಂತಹ ಕಥೆಯನ್ನು ಜುಲೈ 6 ರ ಸಂಜೆ ಜರುಗಲಿದೆ ಎಂದು ತಿಳಿಸಿದ್ದಾರೆ.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC