ಸರಗೂರು: ಗುರು ಪೂರ್ಣಿಮಾವನ್ನು ಆಷಾಢ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಗುರು ಪೂರ್ಣಿಮಾವನ್ನು ಗುರು ಮತ್ತು ಶಿಷ್ಯರ ನಡುವಿನ ಬಾಂದವ್ಯವನ್ನು ಗೌರವಿಸುವುದಕ್ಕಾಗಿ ಆಚರಿಸಲಾಗುವುದು ಎಂದು ಪಡವಲು ವೀರಕ್ತ ಮಠದ ಮಹದೇವಸ್ವಾಮಿಗಳು ತಿಳಿಸಿದರು.
ಪಟ್ಟಣದ 11 ವಾರ್ಡಿನ ಬಿಡಗಲು ಗ್ರಾಮದ ವ್ಯಾಪ್ತಿಯ ಪಡವಲು ವೀರಕ್ತ ಮಠದಲ್ಲಿ ಗುರುವಾರದಂದು ಗುರು ಪೂರ್ಣಿಮೆ ಪೂಜೆ ಕಾರ್ಯಕ್ರಮ ಹಾಗೂ ಕಾಳ ಓಡಯ ಗುರುಗಳ ಗದ್ದಿಗೆ ಮತ್ತು ವೀರಭದ್ರೇಶ್ವರ ಸ್ವಾಮಿಗೆ ರುದ್ರಾಭಿಷೇಕ ಬಿಲ್ವಾರ್ಚನೆ ದಾಸೋಹ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿ ಮಾತನಾಡಿದರು.
ಮಲೈ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಕಾರ್ಯನಿರ್ವಾಹಣಾಧಿಕಾರಿ ಎ ಇ ರಘು ಮಾತನಾಡಿ, ಗುರುಗಳನ್ನು ದೇವರೆಂದು ಪೂಜಿಸುವ ಪ್ರತಿಯೊಬ್ಬ ವ್ಯಕ್ತಿಗೂ ಮೀಸಲಿಡಲಾದ ದಿನವಾಗಿದೆ. ಪ್ರತಿಯೊಬ್ಬರ ಬದುಕಿನಲ್ಲೂ ಗುರುವಿನ ಮಹತ್ವ ತುಂಬಾನೇ ವಿಶೇಷವಾಗಿರುತ್ತದೆ. ಗುರು ನಮಗೆ ಪ್ರತಿಯೊಂದು ಹಂತದಲ್ಲೂ ಜ್ಞಾನವನ್ನು ಮತ್ತು ಮಾರ್ಗದರ್ಶನವನ್ನು ನೀಡುವವನಾಗಿದ್ದಾನೆ. ಅವರು ನಮಗೆ ಪೋಷಕರಾಗಿದ್ದರು ಸರಿ, ಗುರುಗಳಾಗಿದ್ದರು ಸರಿ ನಾವೆಲ್ಲರೂ ಗುರು ಪೂರ್ಣಿಮೆಯಂದು ಅವರನ್ನು ಸ್ಮರಿಸುತ್ತೇವೆ ಎಂದು ತಿಳಿಸಿದರು.
ಗುರು ಪೂರ್ಣಿಮಾ ಕೇವಲ ಧಾರ್ಮಿಕ ಮಹತ್ವವನ್ನು ಹೊಂದಿರುವ ದಿನವಲ್ಲ. ಬದಲಾಗಿ, ಇದು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಮಾರ್ಗದರ್ಶನವನ್ನು ನೀಡುವ ಗುರುವನ್ನು ಗೌರವಿಸುವ ದಿನವಾಗಿದೆ. ಅದು ನಮಗೆ ಶಾಲೆಯಲ್ಲಿ ವಿದ್ಯೆಯನ್ನು ಕಲಿಸಿದ ಗುರುಗಳೇ ಆಗಿರಬೇಕೆಂದೇನಿಲ್ಲ. ನಮಗೆ ಮೊದಲ ಮಾತನ್ನು ಕಲಿಸಿದ ನಮ್ಮ ಪೋಷಕರಿಗೆ ಆಗಿರಬಹುದು, ಜೀವನದ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನವನ್ನು ನೀಡಿದವರಿಗೆ ಆಗಿರಬಹುದು ಈ ದಿನ ಗೌರವವನ್ನು ಸೂಚಿಸಲಾಗುತ್ತದೆ ಎಂದರು.
ಕೆ.ಆರ್.ನಗರ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಮಾತನಾಡಿ, ಕೆಲವೊಂದು ಕಡೆಗಳಲ್ಲಿ ಈ ದಿನ ಜನರು ಪವಿತ್ರ ನದಿಗಳಲ್ಲಿ ಸ್ನಾನವನ್ನು ಮಾಡಿ ಗುರುವನ್ನು ಸ್ಮರಿಸಿ ಉಪವಾಸ ವ್ರತವನ್ನು ಆಚರಿಸುತ್ತಾರೆ. ಈ ದಿನ ಗುರುಗಳಿಗೆ ಉಡುಗೊರೆಯನ್ನು ನೀಡುತ್ತಾರೆ. ಅವರ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ. ಗುರುವಿಗೆ ಸಂಬಂಧಿಸಿದ ಕಥೆಗಳನ್ನು, ಭಜನೆಗಳನ್ನು ಮತ್ತು ಮಂತ್ರಗಳನ್ನು ಈ ದಿನ ಪಠಿಸಲಾಗುತ್ತದೆ ಎಂದು ತಿಳಿಸಿದರು.
ಈ ಗುರು ಪೂರ್ಣಿಮೆ ದಿನದಂದು ಮಠದಲ್ಲಿ ದಾಸೋಹ ನಡೆಸಲಾಯಿತು. ಈ ಸಂದರ್ಭದಲ್ಲಿ ಪೂಜೆ ಮತ್ತು ದಾಸೋಹ ಸೇವಾರ್ಥದಾರು ಸುಲೋಚನಾ ಕುಟುಂಬದವರು, ವೆಂಕಟಯ್ಯಛತ್ರ ಮೈಸೂರು ಪರಮೇಶ್ ಕುಟುಂಬದವರು, ಕೋತ್ತೇಗಾಲ ಸುನೀತಾ ರಾಜೇಂದ್ರ ಕುಮಾರ್, ಮುಳ್ಳೂರು ಮಹಾದೇವಮ್ಮ ಶ್ರೀಕಂಠ ಇನ್ನೂ ಮುಖಂಡರು ಸೇರಿದಂತೆ ಪಟ್ಟಣ ಹಾಗೂ ಅಕ್ಕಪಕ್ಕದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC