ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಬಣ ರಾಜಕೀಯ ತಾರಕಕ್ಕೇರುತ್ತಿದೆ. ಎರಡು ಬಣಗಳು ದೆಹಲಿಯಲ್ಲಿ ತಂತ್ರ, ಪ್ರತಿ ತಂತ್ರ ಹೆಣೆಯುತ್ತಿದೆ.
ಒಂದೆಡೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬೆಂಬಲಿಗರು ದೆಹಲಿಗೆ ತೆರಳಿ ವಿರೋಧಿ ಬಣದ ವಿರುದ್ಧ ದೂರು ನೀಡಿದೆ. ಇನ್ನೊಂದೆಡೆ ವಿಜಯೇಂದ್ರ ವಿರೋಧಿ ಬಣ ದೆಹಲಿ ಯಾತ್ರೆಗೆ ಸಜ್ಜಾಗಿದೆ.
ಕಳೆದ ವಾರ ದೆಹಲಿಗೆ ತೆರಳಿದ್ದ ಎಂಪಿ ರೇಣುಕಾಚಾರ್ಯ ತಂಡ, ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಓಂ ಪಾಠಕ್ ಅವರನ್ನು ಭೇಟಿಯಾಗಿ, ದಾವಣಗೆರೆಯಲ್ಲಿ ಪ್ರತ್ಯೇಕ ಸಮಾವೇಶ ನಡೆಸಿದ ಬಗ್ಗೆ ದೂರು ಸಲ್ಲಿಸಿತ್ತು.
ಇದೀಗ ವಿಜಯೇಂದ್ರ ವಿರುದ್ಧದ ಬಣ ಮುಂದಿನ ವಾರ ದೆಹಲಿ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಂಡಿದೆ. ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ ಸೇರಿದಂತೆ ಭಿನ್ನರ ತಂಡದ ಸದಸ್ಯರು ಈ ಪ್ರವಾಸದಲ್ಲಿ ಭಾಗಿಯಾಗಲಿದ್ದಾರೆ. ಇವರ ಜೊತೆಗೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಶಾಸಕ ಬಿ.ಪಿ. ಹರೀಶ್ ಕೂಡ ತೆರಳಲಿದ್ದಾರೆ ಎಂದು ವರದಿ ತಿಳಿಸಿದೆ.
ವಿಜಯೇಂದ್ರ ವಿರೋಧಿ ಬಣ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ವಿಜಯೇಂದ್ರ ಮುಂದುವರೆಯಬಾರದು ಎನ್ನುವ ಬೇಡಿಕೆಯನ್ನು ಹೈಕಮಾಂಡ್ ಮುಂದಿಡಲಿದೆ ಎಂದು ಹೇಳಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC